ಚಿಕ್ಕಬಳ್ಳಾಪುರ: ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಜೊತೆ ಅಜ್ಜಿಯೊಬ್ಬರು 101ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.
ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಸೇರಿದಂತೆ ನೂರಾರು ಜನರಿರುವ ತನ್ನ ಕುಡಿಯನ್ನು ನೋಡುವ ಅದೃಷ್ಟ ಅದು ಎಷ್ಟು ಜನಕ್ಕೆ ಇರುತ್ತೋ ಇಲ್ಲವೊ ಗೊತ್ತಿಲ್ಲ. ಆದರೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮಮಿದ್ದೆ ಬಡಾವಣೆಯಲ್ಲಿ 101 ವಯಸ್ಸಿನ ಮುನಿಯಮ್ಮ ಅವರು ಆರೋಗ್ಯವಾಗಿದ್ದಾರೆ. ಕಣ್ಣು, ಕಿವಿ ಅಂಗಾಗಗಳು ಚೆನ್ನಾಗಿದ್ದು ಈಗಿನ ಯುವಕ ಯುವತಿಯರೇ ನಾಚುವ ಹಾಗೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.
ಅಜ್ಜಿ ಮುನಿಯಮ್ಮ 101ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಒಂದೆಡೆ ಸೇರಿ ಶತಾಯುಷಿ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಭರ್ಜರಿ ಬಾಟೂಟ ಹಾಕಿಸಿದ್ದಾರೆ. ಮುನಿಯಮ್ಮ ಅವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಅವರಿಗೆ ತಲಾ ನಾಲ್ಕು ಜನ ಮಕ್ಕಳು, 16 ಜನ ಮೊಮ್ಮಕ್ಕಳು, 20ಕ್ಕೂ ಹೆಚ್ಚು ಮರಿ ಮೊಮ್ಮಕ್ಕಳಿದ್ದಾರೆ. ಅವರಲ್ಲಿ ಬಹುತೇಕ ಎಲ್ಲರೂ ಈಗ ಅಜ್ಜಿಯ ಹುಟ್ಟು ಹಬ್ಬಕ್ಕೆ ಆಗಮಿಸಿ, ತಮ್ಮ ಅಜ್ಜಿ ಇನ್ನೂ ನೂರು ಕಾಲ ಚೆನ್ನಾಗಿರಲಿ ಅಂತ ಶುಭ ಹಾರೈಸಿದ್ದಾರೆ.
ಈಗಿನ ಕಾಲದ ಯುವ ಜನತೆ ಮೂವತ್ತು ಮೂವ್ವತೈದು ವರ್ಷ ಆಗುತ್ತಿದ್ದಂತೆ ಕಾಯಿಲೆಗೆ ತುತ್ತಾಗುತ್ತಾರೆ. ಮುನಿಯಮ್ಮ ಅವರು ಯಾವುದೇ ಕಾಯಿಲೆ ತುತ್ತಾಗದೆ, ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ.