ಚಿಕ್ಕಬಳ್ಳಾಪುರ: ಗಂಡನ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಪತ್ನಿ ತನ್ನ ತಾಳಿಯನ್ನೇ ಮಾರಿದ ಪ್ರಕರಣದ ಪಬ್ಲಿಕ್ ಟಿವಿ ವರದಿಗೆ ಹಲವರು ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದ ಲಿಂಗಪ್ಪ ಅವರಿಗೆ ಹೃದಯಾಘಾತವಾಗಿತ್ತು. ಆ ವೇಳೆ ಪತಿಯ ಶಸ್ತ್ರಚಿಕಿತ್ಸೆಗೆ ಪತ್ನಿ ಬೀರಮ್ಮ ತಮ್ಮ ತಾಳಿಯನ್ನು ಮಾರಿ ಹಣ ಹೊಂದಿಸಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವೂ ಇಲ್ಲದೇ ದಂಪತಿ ಸಮಸ್ಯೆ ಎದುರಿಸಿದ್ದರು.
Advertisement
Advertisement
ಪತಿಯ ಚಿಕಿತ್ಸೆಗೆ ಮಾತ್ರೆಗಳನ್ನು ಸಹ ಕೊಡಿಸಲು ಬೀರಮ್ಮ ಸಮಸ್ಯೆ ಎದುರಿಸಿದ್ದರು. ಅಲ್ಲದೇ ಅವರ ಜೀವನ ನಿರ್ವಹಣೆ ಕೂಡ ಕಷ್ಟವಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡರಾದ ಮುನಿರಾಮು, ಕೃಷ್ಣಾರೆಡ್ಡಿ ಅವರು ಚಿಕ್ಕಬಳ್ಳಾಪುರ ನಗರದಿಂದ ಕುರಪ್ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮಾತ್ರೆ ನೀಡಿದ್ದಾರೆ. ಅಲ್ಲದೇ ಹಲವರು ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿ ಧನಸಹಾಯ ಹಾಗೂ ದಿನಸಿ ಕಿಟ್ ಸೇರಿದಂತೆ ತರಕಾರಿ ವಿತರಣೆ ಮಾಡಿದ್ದಾರೆ.
Advertisement
ದೂರದ ಪೋಲ್ಯಾಂಡ್ ದೇಶದಲ್ಲಿರೋ ಕನ್ನಡಿಗರೊಬ್ಬರು ಬೀರಮ್ಮ ಅವರ ಬ್ಯಾಂಕ್ ಖಾತೆಗೆ ಧನಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಹಲವರು ಮಹಿಳೆಯ ಬ್ಯಾಂಕ್ ಖಾತೆ ನಂಬರ್ ಪಡೆದುಕೊಳ್ಳುತ್ತಿದ್ದು, ಧನಸಹಾಯ ಮಾಡುವುದಾಗಿ ತಿಳಿಸಿದ್ದಾರೆ.