– ದತ್ತ ಮಾಲಾಧಾರಣೆ ಮಾಡಿದ ನೂರಾರು ಭಕ್ತರು
ಚಿಕ್ಕಮಗಳೂರು: ಕಾಫಿನಾಡಲ್ಲಿ (Chikkamagaluru) ಇಂದಿನಿಂದ ದತ್ತಜಯಂತಿ (Dattajayanti) ಸಂಭ್ರಮ ಮನೆ ಮಾಡಿದ್ದು, ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಸಚಿವ ಸಿ.ಟಿ ರವಿ (C.T Ravi) ದತ್ತ ಮಾಲಾಧಾರಣೆ (Dattamala )ಮಾಡಿದ್ದಾರೆ.
ಸಿ.ಟಿ ರವಿಯವರ ಜೊತೆ ಭಜರಂಗದಳ ಮುಖಂಡ ರಘು ಸಖಲೇಶಪುರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ದತ್ತ ಭಕ್ತರಿಂದ ಮಾಲಾಧಾರಣೆ ಮಾಡಲಾಗಿದೆ. ಇಂದಿನಿಂದ 9 ದಿನಗಳ ಕಾಲ ವ್ರತದಲ್ಲಿ ಇರುವ ದತ್ತಭಕ್ತರು, ಡಿಸೆಂಬರ್ 14 ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ. 12ರಂದು ಅನಸೂಯ ಜಯಂತಿ, 13 ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. 14 ರಂದು 25,000ಕ್ಕೂ ಅಧಿಕ ಭಕ್ತರಿಂದ ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಲಿದ್ದಾರೆ.
ಮಾಲಾಧಾರಣೆ ಬಳಿಕ ಮಾತಾಡಿದ ಸಿ.ಟಿ ರವಿಯವರು, ರಾಜ್ಯದ ಉದ್ದಗಲಕ್ಕೂ ವಕ್ಫ್ ಬೋರ್ಡ್ ಗಲಾಟೆ ಇದೆ. ವಕ್ಫ್ ಬೋರ್ಡಿಗೆ ಕಾಫಿನಾಡಲ್ಲಿ ಮೊದಲ ಬಲಿಯೇ ದತ್ತಪೀಠ, ದತ್ತಾತ್ರೇಯ ದೇವರು. 1973-74ರಲ್ಲಿ ಮೂಲ ದಾಖಲೆ ಪರಿಶೀಲಿಸದೆ ದತ್ತಪೀಠವನ್ನೂ ಸೇರಿಸಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ ಮಾಡಿದ್ದರು. ದತ್ತಪೀಠವನ್ನ ಉಳಿಸಿಕೊಳ್ಳಲು ಜನಾಂದೋಲನ ಮಾಡಿ, ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಯಿತು. ಜನಾಂದೋಲನ ಪ್ರಭಾವ ಬೀರಿದೆ, ನ್ಯಾಯಾಲಯದ ಹೋರಾಟದಲ್ಲಿ ಅರ್ಧ ನ್ಯಾಯ ಸಿಕ್ಕಿದೆ. ಬಾಂಗ್ಲಾ ಬೆಳವಣಿಗೆ ಗಮನಿಸಿದ್ರೆ ಇಸ್ಲಾಂ ಡಿಎನ್‍ಎಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎಂಬಂತೆ ಇದೆ ಎಂದಿದ್ದಾರೆ.
ಇಸ್ಲಾಂ ಹೆಸರಿನ ಕ್ರೌರ್ಯ, ನರಮೇಧ, ಸಂಸ್ಕೃತಿ ನಾಶಕ್ಕೆ ಸಾಕ್ಷಿ ಬೇಕಿಲ್ಲ. ಅವರನ್ನು ಅವರದ್ದೇ ರೀತಿಯಲ್ಲಿ ಹೆದರಿಸದೇ ಇದ್ದರೆ ಜಗತ್ತಿನ ಎಲ್ಲಾ ಸಂಸ್ಕೃತಿ, ಪರಂಪರೆ, ಭಾಷೆ ನಾಶವಾಗುತ್ತದೆ. ಬಾಂಗ್ಲಾದಲ್ಲಿ 90% ರಷ್ಟು ಮುಸ್ಲಿಮರು ಎಂದು ಹೇಳುತ್ತಿದ್ದಾರೆ. ನೂರು ವರ್ಷಗಳ ಹಿಂದೆ 1% ಮುಸ್ಲಿಮರು ಇರಲಿಲ್ಲ. ಅಖಂಡ ಭಾರತದಲ್ಲೇ ಮುಸ್ಲಿಮರು ಇರಲಿಲ್ಲ ಎಂದಿದ್ದಾರೆ.
ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಪೂಜೆ ನಡೆಯುವುದರಿಂದ 9 ದಿನಗಳ ಕಾಲ ಜಿಲ್ಲಾದ್ಯಂತ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.