ಬೆಂಗಳೂರು: ಜೆ.ಸಿ ಮಾಧುಸ್ವಾಮಿ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.
ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಮಾಧು ಸ್ವಾಮಿ ಅವರು ಮಂತ್ರಿಯಾಗಿ ಎನ್ನುವ ಬದಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದಾಗಿ ಹೇಳಿದರು. ಕೂಡಲೇ ತನ್ನ ತಪ್ಪಿನ ಅರಿವಾಗಿ ಮಂತ್ರಿಯಾಗಿ ಎಂದು ಹೇಳುತ್ತಾ ನಸುನಕ್ಕರು.
Advertisement
ಚಿಕ್ಕನಾಯಕನ ಹಳ್ಳಿಯ ಮಾಧುಸ್ವಾಮಿ ಅವರಿಗೆ ಲಿಂಗಾಯತ ಕೋಟಾದಿಂದ ಮಂತ್ರಿ ಸ್ಥಾನ ದೊರಕಿದೆ. ಇವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
Advertisement
Advertisement
ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?
ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕರಾಗಿರುವ ಮಾಧುಸ್ವಾಮಿ ಹೆಚ್‍ಡಿಕೆ ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ್ದಾಗ ಬಿ.ಎಸ್.ವೈ ಬೆನ್ನಿಗೆ ನಿಂತಿದ್ದರು. ಸದನದ ಹೊರಗಡೆ ಮತ್ತು ಸದನದ ಒಳಗಡೆ ಬಿಎಸ್‍ವೈ ಪಾಲಿನ ಆಪತ್ಭಾಂಧವ ಎಂದೇ ಗುರುತಿಸಿಕೊಂಡಿದ್ದಾರೆ.
Advertisement
ಯಾವುದೇ ವಿಚಾರಗಳನ್ನು ನೇರ ನೇರವಾಗಿ ಹೇಳು ಮಾಧುಸ್ವಾಮಿ ಕಾನೂನು, ಆಡಳಿತ, ಕೃಷಿ, ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ. ಉತ್ತಮ ಸಂಸದೀಯ ಪಟು ಆಗಿರುವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಉತ್ತಮ ಮಾತುಗಾರನಾಗಿ ಗುರುತಿಸಿಕೊಂಡಿದ್ದಾರೆ. ಬಂಡಾಯ ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಲ್ಲಿ ನಡೆದ ಹೈಡ್ರಾಮದ ವೇಳೆ ಬಿಜೆಪಿ ಪರವಾಗಿ ಮಾಧುಸ್ವಾಮಿ ಒಬ್ಬರೇ ಎದ್ದು ನಿಂತು ಪ್ರಬಲವಾಗಿ ವಾದ ಮಂಡಿಸುತ್ತಿದ್ದರು. ಹೀಗಾಗಿ ಮಾಧುಸ್ವಾಮಿ ಸಚಿವರಾಗಿ ತಮ್ಮ ಜೊತೆಗಿದ್ದರೆ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೈಕಮಾಂಡ್‍ಗೆ ಬಿಎಸ್ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದರು.
ಜನತಾ ಪಕ್ಷ ಒಟ್ಟಿಗೆ ಇದ್ದಾಗ ಅದರಲ್ಲಿ ಮಾಧುಸ್ವಾಮಿ ಗುರುತಿಸಿಕೊಂಡಿದ್ದರು. ಆ ನಂತರ ರಾಮಕೃಷ್ಣ ಹೆಗ್ಗಡೆ ಜತೆ ಗುರುತಿಸಿಕೊಂಡರು. ಆ ನಂತರ ಯಡಿಯೂರಪ್ಪ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಕಟ್ಟಿದಾಗ ಕೆಜೆಪಿಗೆ ಬಂದರು. ಬಳಿಕ ಯಡಿಯೂರಪ್ಪನವರು ಮುನಿಸು ಮರೆತು ಬಿಜೆಪಿಗೆ ಬಂದಾಗ ಅವರ ಜೊತೆ ಮರಳಿ ಕಮಲದ ಕಡೆ ಹೆಜ್ಜೆ ಹಾಕಿದ ನಾಯಕರ ಪೈಕಿ ಇವರು ಒಬ್ಬರಾಗಿದ್ದಾರೆ.
ಸಚಿವ ಸ್ಥಾನ ಸಿಕ್ಕ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಧು ಸ್ವಾಮಿ, ಯಾವ ಖಾತೆ ಕೊಟ್ಟರು ಉತ್ತಮ ಕೆಲಸ ಮಾಡುತ್ತೇನೆ. ನಾನು ಹಳ್ಳಿಯಿಂದ ಬಂದವನು, ಹೀಗಾಗಿ ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವವಿರುವುದರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತೆನೆ. ರೈತರಿಗೆ ಸಂಬಂಧಪಟ್ಟ ಖಾತೆಯಲ್ಲಿ ಕೆಲಸ ಮಾಡುವ ಆಸೆ ಇದೆ. ಆದರೆ ಖಾತೆ ಹಂಚಿಕೆ ಮಾಡುವವರು ನಾಯಕರು, ಅವರಿಗೆ ಏನು ಆಸೆ ಇದೆಯೋ ಗೊತ್ತಿಲ್ಲ. ಅವರ ನಿರೀಕ್ಷೆಯನ್ನು ಪೂರ್ತಿಗೊಳಿಸುವುದು ಕೂಡ ನಮ್ಮ ಕರ್ತವ್ಯ ಎಂದರು.