ದಾವಣಗೆರೆ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶಾಸಕ ಶ್ರೀರಾಮುಲು ಅವರು ಮುಖ್ಯಮಂತ್ರಿ ಆಗಲೆಬೇಕು ಎಂದು ಬಿಜೆಪಿ ಶಾಸಕ ರಾಜುಗೌಡ ಒತ್ತಾಯಿಸಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಸಮೀಪದ ವಾಲ್ಮೀಕಿ ಮಠದಲ್ಲಿ ನಡೆದ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಕೂಗು ವಿಧಾನಸೌಧಕ್ಕೆ ತಲುಪುತ್ತಿಲ್ಲ. 17 ಜನ ಶಾಸಕರು, ಇಬ್ಬರು ಸಂಸದರು ಇದ್ದರೂ ಕೂಗು ಕೇಳುತ್ತಿಲ್ಲ. ಸಮಾಜದಿಂದ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶ್ರೀರಾಮುಲು ಮುಖ್ಯಮಂತ್ರಿ ಆಗಲೆಬೇಕು ಅಂತ ವಾಲ್ಮೀಕಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ಶಾಸಕರು ಹೇಳಿದರು.
ಕುರುಬರ ಕೈಯಿಂದ ಬೋಣಿಗೆಯಾದರೆ ಒಳ್ಳೆಯದು ಎನ್ನುತ್ತಾರೆ. ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಸಿಗಲಿದೆ. ನಿಮ್ಮ ಇಬ್ಬರಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಸಮಾಜಕ್ಕೆ 7.1 ಮಿಸಲಾತಿ ಮಾಡಲೇಬೇಕು ಎಂದು ಸತೀಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಕೇಳಿಕೊಂಡರು.
ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಯಾವುದೇ ಆಪರೇಷನ್ ನಡೆಯುತ್ತಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರಿಗೆ ವೈಯಕ್ತಿಕ ಸಮಸ್ಯೆ ಇದೆ. ಅವರಿಗೆ ಕಾಂಗ್ರೆಸ್‍ನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಅವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡೇ ಹೊರ ಬರುತ್ತಿದ್ದಾರೆ ಎಂದು ಹೇಳಿದರು.
ಆಡಿಯೋ ಪ್ರಕರಣ ಆರೋಪವನ್ನು ಸಾಬೀತು ಮಾಡಿ ಅಂತ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಎಸಿಬಿ, ಸಿಬಿಐ ಮೈತ್ರಿ ಸರ್ಕಾರದ ಕೈಯಲ್ಲಿದೆ. ತನಿಖೆ ನಡೆಸಿ ಆರೋಪ ಸಾಬೀತು ಮಾಡಿದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲಿ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಪಕ್ಷದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅಸಮಾಧಾನದಿಂದ ಬಾಂಬೆ ಟಿಕೆಟ್ ತೆಗೆಸಿದರೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವುದು ಕಾಂಗ್ರೆಸ್ ಶಾಸಕರ ತಂತ್ರ ಎಂದು ಪರೋಕ್ಷವಾಗಿ ಡಾ.ಸುಧಾಕರ್ ಅವರಿಗೆ ಟಾಂಗ್ ಕೊಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv