ಬೆಂಗಳೂರು: ಅಮೆರಿಕದಿಂದ ಆಗಮಿಸುತ್ತಿರುವ ಸಿಎಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸೋಮವಾರ ಜೆಡಿಎಸ್ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಆದರೆ ಈಗ ಬದಲಾವಣೆ ಮಾಡಿ ಇಂದು ಸಂಜೆಯೇ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.
Advertisement
Advertisement
ಸಿಎಂ ಅಮೆರಿಕದಿಂದ ನೇರವಾಗಿ ದೆಹಲಿಗೆ ಇಂದು ಸಂಜೆ 3.15ಕ್ಕೆ ಆಗಮಿಸಲಿದ್ದು, ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಎಚ್‍ಎಎಲ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದು, ಬಂದ ತಕ್ಷಣ ಜೆಡಿಎಸ್ ಶಾಸಕರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಈಗಾಗಲೇ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾಜಿ ಪ್ರಧಾನಿ ದೇವೇಗೌಡ ಮಾತುಕತೆ ನಡೆಸಿದ್ದು, ಸಿಎಂ ಆಗಮಿಸಿದ ತಕ್ಷಣ ದೇವೇಗೌಡರು, ಕುಮಾರಸ್ವಾಮಿ, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ.
ಸಿಎಂ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಾಗಲೇ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ. ಶಾಸಕರು ಮರಳಿ ಬರುವುದಿಲ್ಲ, ಎಳೆದಾಡಿ ಬಹುಮತ ಸಾಬೀತಿಗೆ ಮುಂದಾಗಿ ಮುಖಭಂಗ ಅನುಭವಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂಬ ತೀರ್ಮಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ದ್ರೋಹ ಮಾಡಿ ನಮ್ಮ ಶಾಸಕರನ್ನು ಸೆಳೆದುಕೊಂಡಿದೆ ಎಂದು ಜನರ ಬಳಿ ಹೇಳಿ ಪಕ್ಷ ಸಂಘಟನೆ ಮಾಡಲು ಜೆಡಿಎಸ್ ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿವೆ.