– ರೆಸಾರ್ಟ್ ಒಳಗಡೆ ಮೊಬೈಲ್ ಜಾಮರ್
– ಶುಕ್ರವಾರ ರಾತ್ರಿ ರೆಸಾರ್ಟ್ ತಲುಪಿದ ಸಿಎಂ ಕುಟುಂಬ
ಮಡಿಕೇರಿ: ಪುತ್ರನ ನಿಖಿಲ್ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದ ಸಿಎಂ ಎಲೆಕ್ಷನ್ ಮುಗಿದು 15 ದಿನ ಕಳೆದರೂ ರಿಲ್ಯಾಕ್ಸ್ ಮೂಡ್‍ನಿಂದ ಹೊರಬರುವ ಲಕ್ಷಣ ಕಾಣುತ್ತಿಲ್ಲ. ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ, ಬಳಿಕ ಟೆಂಪಲ್ ರನ್ ಮುಗಿಸಿದ ಸಿಎಂ ಇದೀಗ ಕೊಡಗಿನ ಐಶಾರಾಮಿ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಡಿಕೇರಿಯಿಂದ 6 ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ 190 ಎಕ್ರೆ ವಿಸ್ತೀರ್ಣ ಹೊಂದಿರುವ ಇಬ್ಬನಿ ರೆಸಾರ್ಟಿನಲ್ಲಿ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ, ಪುತ್ರ ನಿಖಿಲ್, ಸಚಿವ ಸಾರಾ ಮಹೇಶ್ ಮತ್ತು ಕುಟುಂಬ ವಿಶ್ರಾಂತಿ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ 7:30ಕ್ಕೆ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಸಿಎಂ ಮತ್ತು ಕುಟುಂಬ ರೆಸಾರ್ಟ್ ಪ್ರವೇಶಿಸಿದೆ.
Advertisement
Advertisement
ಸಾರಾ ಮಹೇಶ್ ತಮ್ಮ ಹೆಸರಿನಲ್ಲಿ ಒಟ್ಟು 6 ಕಾಟೇಜ್ ಬುಕ್ ಮಾಡಿದ್ದಾರೆ. ಅದರಲ್ಲಿ ಒಂದಾದ `ಪಾಯಿಂಟ್ ಸೆಟ್ಟಾ’ ಹೆಸರಿನ ಕಾಟೇಜ್ ಸಂಪೂರ್ಣ ಖಾಸಗಿ ಕಾಟೇಜ್ ಆಗಿದ್ದು, ಅದರಲ್ಲಿ ಸಿಎಂ ವಾಸ್ತವ್ಯ ಹೂಡಿದ್ದಾರೆ.
Advertisement
ದಿನವೊಂದಕ್ಕೆ 80 ಸಾವಿರ ಶುಲ್ಕ ಇರುವ ಈ ಕಾಟೇಜ್‍ನಲ್ಲಿ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ ಮೊದಲಾದ ಸೌಲಭ್ಯಗಳಿವೆ. ಸಿಎಂ ತಂಗುವ ಕಾಟೇಜ್‍ಗೆ ಬೆಂಗಳೂರಿನ ಉನ್ನತ ದರ್ಜೆಯ 8 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾಯಿಂಟ್ ಸೆಟ್ಟಾದ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಇದ್ದು, ಸೆಟ್ಟಾ ಒಳಗಡೆ ಗರಿಷ್ಠ ಖಾಸಗಿತನ ಇರಲಿದೆ ಎನ್ನಲಾಗಿದೆ.
Advertisement
ರೆಸಾರ್ಟ್ ಒಳಗೆ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಸಿಎಂ ವಾಸ್ತವ್ಯ ಹಿನ್ನಲೆ ರೆಸಾರ್ಟಿನಲ್ಲಿ ಭಾರೀ ಪೊಲೀಸ್ ಹಾಗೂ ಖಾಸಗಿ ಭದ್ರತೆ ಕೈಗೊಳ್ಳಲಾಗಿದೆ. ಈ ನಡುವೆ ಜೆಡಿಎಸ್‍ನ ಕೆಲ ಮುಖಂಡರು ರೆಸಾರ್ಟಿಗೆ ಭೇಟಿ ನೀಡುವ ಲಕ್ಷಣಗಳಿವೆ. ರೆಸಾರ್ಟಿನಲ್ಲಿರುವ ಸಿಎಂ ಮತ್ತು ಕುಟುಂಬ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿಶೇಷ ಪೂಜೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.