ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

Public TV
1 Min Read
bsy pooje

– ಹೊನ್ನಾಂಬಿಕೆ ದೇವಿ ದರ್ಶನ ಪಡೆದ ಬಿಎಸ್‍ವೈ
– ಸರ್ಕಾರ ಪೂರ್ಣಾವಧಿ ಪೂರೈಸಲೆಂದು ಪ್ರಾರ್ಥನೆ

ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಲಯ ಅಮಾವಾಸ್ಯೆ ಪೂಜೆಯ ಮೊರೆ ಹೋದರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಬಿಎಸ್‍ವೈ ಇಂದು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕೆ ದೇವಿ ಮೊರೆ ಹೋಗಿದ್ದು, ಯಡಿಯೂರಪ್ಪನವರು ಸಿಎಂ ಆಗುವುದಾಗಿ ಇದೇ ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು. ಈ ಕುರಿತು ಮೂರು ತಿಂಗಳ ಹಿಂದೆ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಯಡಿಯೂರಪ್ಪನವರ ಪರ ಭವಿಷ್ಯ ಕೇಳಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಮುಖ್ಯಮಂತ್ರಿಯಾದರೂ ಸಂಕಷ್ಟ ಇದೆ ಎಂದು ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು.

vlcsnap 2019 09 28 15h55m59s286

ಸಂಕಷ್ಟ ಪರಿಹಾರಕ್ಕಾಗಿ ಮಹಾಲಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸುವಂತೆ ಅರ್ಚಕರು ಈ ಹಿಂದೆ ಬಿಎಸ್‍ವೈ ಭೇಟಿ ನೀಡಿದಾಗ ಸೂಚಿಸಿದ್ದರು. ಹೀಗಾಗಿ ಆಪ್ತ ಸಹಾಯಕ ಸಂತೋಷ್ ಅವರ ಸಲಹೆಯಂತೆ ಸಿಎಂ ಯಡಿಯೂರಪ್ಪ ಹೊನ್ನಾಂಬಿಕಾ ದೇವಸ್ಥಾನಕ್ಕೆ ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಎಸ್‍ವೈ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಧೂತರಾಯನ ಬಳಿ ಸಿಎಂ ಪ್ರಶ್ನೆ ಹಾಕಿದರು. ಸಿಎಂ ಮತ್ತು ಅರ್ಚಕರಿಗೆ ಮಾತ್ರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಿ ವಿಶೇಷ ಪೂಜೆ ಸಲ್ಲಿಸಲಾಯಿತು.

vlcsnap 2019 09 28 15h56m37s439

ಪೂಜೆ ನಂತರ ಪ್ರತಿಕ್ರಿಯಿಸಿದ ಬಿಎಸ್‍ವೈ, ತಾಯಿಯ ಆಶೀರ್ವಾದ ಪಡೆದಿದ್ದೇನೆ. ಜನತೆ ನೆಮ್ಮದಿ ಸುಭೀಕ್ಷದಿಂದ ಇರಲಿ, ನಮ್ಮ ಸರ್ಕಾರದ ಅವಧಿ ಪೂರ್ಣವಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಮ್ಮ ಆಪ್ತ ಸಂತೋಷ್ ಒತ್ತಾಯದ ಮೇರೆಗೆ ಬಂದಿದ್ದೇನೆ. ಇಂದು ಮಹಾಲಯ ಅಮಾವಾಸ್ಯೆ ಒಳ್ಳೆದಾಗುತ್ತೆ ಎಂದಿದ್ದರು ಹಾಗಾಗಿ ಬಂದಿದ್ದೆ. ತಾಯಿಯ ದರ್ಶನದಿಂದ ನೆಮ್ಮದಿ ಸಮಾಧಾನ ತೃಪ್ತಿ ಹಾಗೂ ಪ್ರೇರಣೆ ಸಿಕ್ಕಿದೆ. ಇಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಒತ್ತಾಯವಿದೆ. ಇದಕ್ಕಾಗಿ ತಕ್ಷಣ 50 ಲಕ್ಷ ರೂ. ಬಿಡುಗಡೆ ಮಾಡುತ್ತೇವೆ. ತಿಂಗಳೊಳಗೆ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *