– ಹೈ ಕಮಾಂಡ್ ಸಿಎಂ ನಿಯಂತ್ರಿಸುತ್ತಿದೆ
ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ನಡುವೆ ಮುಸುಕಿನ ಕಾಳಗ ಇದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಬೆಂಬಲ ಇದೆ. ಆದರೆ ಯಡಿಯೂರಪ್ಪ ಅವರಿಗೆ ಫ್ರಿ ಹ್ಯಾಂಡ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹರಿಹಾಯ್ದಿದ್ದಾರೆ.
ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಸಿಎಂ ಬಿಎಸ್‍ವೈ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಕೆಲಸ ಕಾರ್ಯದಲ್ಲಿ ವರಿಷ್ಠರು ಅಡೆತಡೆ ಉಂಟು ಮಾಡುತ್ತಿರಬಹುದು. ಸಿಎಂಗೆ ವರಿಷ್ಠರಿಂದ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಆದರೆ ಹೈ ಕಮಾಂಡ್ ಹಿಡಿತ ಸಾಧಿಸುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಪಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ನಿಶ್ಚಿತವಾಗಿಯೂ ತೊಂದರೆ ಇದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಅನರ್ಹ ಶಾಸಕರು ಸ್ಪರ್ಧೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 15 ಸ್ಥಾನದಲ್ಲಿ ಕನಿಷ್ಟ 12 ಜನ ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗುತ್ತಾರೆ. ಬಿಜೆಪಿ ಮೇಲೆ ಇದು ಪರಿಣಾಮ ಬೀರುತ್ತದೆ. ಉಪಚುನಾವಣೆ ಬಳಿಕ ಬಿಎಸ್‍ವೈ ಸರ್ಕಾರಕ್ಕೆ ತೊಂದರೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಉಮೇಶ್ ಕತ್ತಿ ಅನರ್ಹರಿಗೆ ಟಿಕೆಟ್ ಕೊಟ್ಟರೆ ಹುಷಾರ್ ಅಂತ ಹೇಳುತ್ತಾರೆ. ಇತ್ತ ಸಿಎಂ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಾರೆ. ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮುಸುಕಿನ ಗುದ್ದಾಟಗಳು ನಡೆದಿವೆ. ಇವರ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿ ಕಾರಿದರು.
Advertisement
ಕೋರ್ಟ್ ಆದೇಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅನರ್ಹರನ್ನು ಯಾರೂ ಕ್ಷಮಿಸುವುದಿಲ್ಲ, ಕ್ಷೇತ್ರದ ಜನರು ಸಹ ಅವರನ್ನು ಕ್ಷಮಿಸುವುದಿಲ್ಲ. ಅವರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಹೆಚ್.ಮುನಿಯಪ್ಪ ವಾಕ್ಸಮರದ ಕುರಿತು ಮಾತನಾಡಿದ ಅವರು, ನಾನು ಕೆ.ಎಚ್.ಮುನಿಯಪ್ಪ ಸ್ನೇಹಿತರು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಪಕ್ಷದ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಜಾಯಿಷಿ ನೀಡಿದ್ದಾರೆ. ಚರ್ಚೆ ಮಾಡಿದ್ದನ್ನೇ ಭಿನ್ನಾಭಿಪ್ರಾಯ ಎಂದು ತೋರಿಸಬಾರದು. ಇದು ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು.