ಮಂಡ್ಯ: ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್) ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ಕೆಆರ್‌ಎಸ್‌ಗೆ ಬಿಎಸ್‍ವೈ ನಾಲ್ಕನೇ ಬಾರಿ ಬಾಗಿನ ಅರ್ಪಿಸಿದರು.
ಆರಂಭದಲ್ಲಿ ಮಳೆಯಾಗದೆ, ಡ್ಯಾಂ ತುಂಬುತ್ತೋ ಇಲ್ಲವೋ ಎಂದು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ನಂತರ ಸುರಿದ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸವನ್ನು ಮೂಡಿಸಿದೆ.
Advertisement
ಬಾಗಿನ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇನೆ. 1 ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡುತ್ತಿದ್ದೆವು. ಪ್ರತಿ ದಿನ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗೆ ಕರೆಮಾಡಿ ಜಲಾಶಯದ ಒಳಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆದರೆ ವರುಣದೇವನ ಕೃಪೆಯಿಂದ ಕೇವಲ 4-5ದಿನಗಳಲ್ಲಿ ಕೆಆರ್‍ಎಸ್ ಭರ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
Advertisement
ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹದಿಂದ ಅಂತರ್ಜಲ ಕುಸಿಯುವುದು ತಪ್ಪಲಿದೆ. ಕೆಆರ್‌ಎಸ್ ಅಭಿವೃದ್ಧಿಗೆ ನಾನು ಶ್ರಮಿಸಲಿದ್ದೇನೆ. ದೇಶವಿದೇಶಗಳಿಂದ ಬರುವ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿ ಕೆಆರ್‌ಎಸ್ ಅಣೆಕಟ್ಟೆಯನ್ನು ರೂಪಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಎಸ್ಟಿಮೇಟ್ ಕಳುಹಿಸುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.
Advertisement
ಕೆಆರ್‌ಎಸ್ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಿ. ಇಲ್ಲಿನ ಗ್ರಾಮಸ್ಥರಿಗೆ ಹಕ್ಕು ಪತ್ರ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಕನ್ನಂಬಾಡಿ ಗ್ರಾಮದಲ್ಲಿ ನನ್ನ ಅಜ್ಜ ಇದ್ದರು. ಬೂಕನಕೆರೆಯಲ್ಲಿ ನನ್ನ ತಂದೆ ಇದ್ದರು. ದಸರಾ ನೋಡಲು ನಾನು ಇಲ್ಲಿಗೆ ಬರುತ್ತಿದೆ. ಈಗ ಈ ಭಾಗವನ್ನು ಅಭಿವೃದ್ಧಿ ಪಡಿಸುವ ಸೌಭಾಗ್ಯ ನನ್ನದಾಗಿದೆ. ಶೀಘ್ರದಲ್ಲೇ ಮೈ ಷುಗರ್ ಕಾರ್ಖಾನೆ, ಪಾಂಡವಪುರ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಹಣಕಾಸಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಖಾನೆ ಆರಂಭ ಮಾಡಲು ಹಣಕಾಸಿನ ನೆರವು ಎಷ್ಟಿದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು ನನಗೆ ತಿಳಿಸಿದಲ್ಲಿ ನಾನು ತಕ್ಷಣ ಅಗತ್ಯ ಹಣವನ್ನು ಬಿಡುಗಡೆ ಮಾಡುತ್ತೇನೆ. ಮತ್ತೊಮ್ಮೆ ಕಾರ್ಖಾನೆಗಳು ಮುಚ್ಚಿದೆ ಎಂಬ ಮಾತನ್ನು ನಾವು ಕೇಳಬಾರದು. ಯಡಿಯೂರಪ್ಪ ಭರವಸೆ ಕೊಟ್ಟರೆ ಅದು ಕೇವಲ ಭರವಸೆಯಾಗಿ ಉಳಿಯುವುದಿಲ್ಲ ಕಾರ್ಯರೂಪಕ್ಕೆ ಬರಲಿದೆ. ಮಾತೇ ಸಾಧನೆಯಾಗಬಾರದು, ಸಾಧನೆ ಮಾತನಾಡಬೇಕು. ಕಾವೇರಿ ಮುನಿಸಿಕೊಳ್ಳದೆ ಪ್ರತಿ ವರ್ಷ ಇದೇ ರೀತಿ ತುಂಬಿ ತುಳುಕಲಿ ಎಂದು ಪ್ರಾರ್ಥಿಸುತ್ತೇನೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದೆ, ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಾಗಿದೆ. ಎರಡು ಸವಾಲುಗಳನ್ನು ಎದುರಿಸಬೇಕಿದೆ. ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಸೆ. 7,8 ರಂದು ಮೋದಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಆಗ ಅತಿವೃಷ್ಠಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಾರಯಣಗೌಡ ಪ್ರತ್ಯಕ್ಷ
ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಅನರ್ಹ ಶಾಸಕ ನಾರಯಣಗೌಡ ಯಡಿಯೂರಪ್ಪನವರ ಪಕ್ಕದಲ್ಲಿಯೇ ನಿಂತು ಆಶ್ಚರ್ಯ ಉಂಟುಮಾಡಿದರು. ಅಲ್ಲದೆ, ಬಾಗಿನ ಅರ್ಪಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ನಾರಾಯಣಗೌಡ ಕಾಣಿಸಿಕೊಂಡಿದ್ದರು. ಅಲ್ಲದೆ ವೇದಿಕೆ ಹತ್ತಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ವೇದಿಕೆ ಮೇಲೆ ಗಣ್ಯರನ್ನು ಸ್ವಾಗತ ಕೋರುವ ವೇಳೆ ನಾರಾಯಣಗೌಡರಿಗೂ ಸ್ವಾಗತ ಕೋರಲಾಯಿತು. ಈ ಮೂಲಕ ಅನರ್ಹ ಶಾಸಕ ನಾರಾಯಣಗೌಡ ಅವರು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಯಿತು.