ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಇತ್ತೀಚೆಗೆ ಬಿಜೆಪಿ ನಾಯಕರೊಂದಿಗೆ ಬೆರೆಯುತ್ತಿರುವ ಬೆನ್ನಲ್ಲೇ ಸೋಮವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಈ ಕುರಿತು ಜಿ.ಟಿ.ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಚುನಾವಣೆ ನಡೆದಿತ್ತು. ಇದಕ್ಕೆ ನನ್ನ ಆಪ್ತ ಸಿದ್ದೇಗೌಡ ಸ್ಪರ್ಧಿಸುತ್ತಿದ್ದ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಿಎಸ್‍ವೈ ತಂಗಿ ಮಗ ಸಹ ಸ್ಪರ್ಧೆ ಮಾಡಿದ್ದರು. ಈ ವಿಚಾರ ಮಾತನಾಡಲು ಬಿಎಸ್‍ವೈ ಅವರ ಮನೆಗೆ ಹೋಗಿದ್ದೆ ಎಂದು ತಿಳಿಸಿದರು.
Advertisement
Advertisement
ಯಡಿಯೂರಪ್ಪ ಅವರ ತಂಗಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಸೂಚಿಸುವಂತೆ ಮನವಿ ಮಾಡಲು ಅವರ ಮನೆಗೆ ತೆರಳಿದ್ದೆ. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿ, ಮನವಿ ಆಲಿಸಿದರು. ನಿಮ್ಮ ತಂಗಿ ಮಗನಿಗೆ ನೀವೆ ಹೇಳಿ ನಾಮಪತ್ರ ವಾಪಾಸ್ ತಗಿಸಿ ಅಂತ ಮನವಿ ಮಾಡಿಕೊಂಡಿದ್ದೆ. ಅದಕ್ಕೆ ಪ್ರತಿಯಾಗಿ ಅವರು ವಿಜಯೇಂದ್ರ ಅವರಿಗೆ ತಿಳಿಸಿ ಬಿಎಸ್‍ವೈ ತಂಗಿ ಮಗ ಅಶೋಕ್ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರು ಎಂದು ಹೇಳಿದರು.
Advertisement
ಇಂದು ಸಿಎಂ ತಂಗಿ ಮಗ ನಾಮಪತ್ರ ವಾಪಸ್ ಪಡೆದರು. ನಮ್ಮ ಮನವಿಗೆ ಸ್ಪಂದಿಸಿದ ಯಡಿಯೂರಪ್ಪನವರಿಗೆ ಧನ್ಯವಾದಗಳು. ನಾನು ಇದೊಂದೆ ವಿಚಾರಕ್ಕೆ ಸಿಎಂ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕೆಲ ನಾಯಕರು ಅಲ್ಲೇ ಇದ್ದರು. ಈ ವಿಚಾರ ಹೊರತು ಪಡಿಸಿ ಬೇರೆನೂ ರಾಜಕೀಯ ಮಾತಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
ಬಿಎಸ್‍ವೈ ತಂಗಿ ಮಗ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಅಧ್ಯಕ್ಷರಾಗಿ ಜಿಟಿಡಿ ಆಪ್ತ ಸಿದ್ದೇಗೌಡ ಆಯ್ಕೆಯಾದ ಸಿದ್ದೇಗೌಡರಿಗೆ ಜಿ.ಟಿ.ದೇವೇಗೌಡ ಅವರು ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ರಾಜ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದಿಲ್ಲವೋ ಅಂತವರು ಮಾತ್ರ ಫೋನ್ ಕದ್ದಾಲಿಕೆ ಮಾಡುತ್ತಾರೆ. ನನಗೆ ಯಾರು ಏನು ಮಾಡುತ್ತಾರೆ ಎನ್ನುವುದು ಬೇಕಾಗಿಲ್ಲ. ಅಲ್ಲದೆ ಅವರು ಏನು ಅಂತಾರೆ, ಇವರೇನು ಅಂತಾನೆ ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಪೋನ್ ಕದ್ದಾಲಿಗೆ ಯಾಕೆ ಮಾಡ್ತಿದ್ದಾರೆ ಅಂತ ನನಗೆ ಅರ್ಥವಾಗುತ್ತಿಲ್ಲ. ಎಲ್ಲವನ್ನು ನೇರವಾಗಿ ಮಾತನಾಡುವವನು ನಾನು. ಹೀಗಾಗಿ ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಫೋನ್ ಕದ್ದಾಲಿಕೆ ಕುರಿತು ಸೂಕ್ತ ತನಿಖೆಯಾಗಲಿ, ಹಿಂದೆಯೂ ಈ ಕುರಿತು ತನಿಖೆ ಆಗಿದೆ. ಈಗಲೂ ಸೂಕ್ತ ತನಿಖೆ ಆಗಲಿ. ವಿಶ್ವನಾಥ್ ಆರೋಪ ಹಾಗೂ ಕುಮಾರಸ್ವಾಮಿಯವರು ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜಿಟಿಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದು ಹೇಳಿದ್ದರು.
ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಬಳಿಕ ಮಾತನಾಡಿದ್ದ ಬಿಎಸ್‍ವೈ, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದು ಸ್ಪಷ್ಟಪಡಿಸಿದ್ದರು.