ಬೆಂಗಳೂರು: ಟ್ರಾಫಿಕ್ ನಿಯಮ ಸೆ.1 ರಿಂದ ಜಾರಿಯಾಗಿದ್ದರೂ ರಾಜ್ಯದಲ್ಲಿ ಜನರಿಗೆ ಮಾದರಿಯಾಗಬೇಕಾದ ವ್ಯಕ್ತಿಗಳೇ ಪಾಲನೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಹೌದು. ಜನಸಾಮಾನ್ಯರು ಸಂಚಾರಿ ನಿಯಮ ಪಾಲಿಸುತ್ತಿಲ್ಲ ಎಂದು ಸಾವಿರಾರು ರೂ.ಗೆ ಕೇಂದ್ರ ಸರ್ಕಾರ ದಂಡ ಹೆಚ್ಚಿಸಿದೆ. ಆದರೆ, ಸಂಚಾರಿ ನಿಯಮ ಪಾಲಿಸಿ ಇತರರಿಗೆ ಮಾದರಿಯಾಗಬೇಕಿದ್ದ ಜನಪ್ರತಿನಿಧಿಗಳೇ ನಿರ್ಲಕ್ಷ್ಯ ವಹಿಸಿದ್ದು, ಕನಿಷ್ಟ ಸೀಟ್ ಬೆಲ್ಟ್ ಸಹ ಹಾಕದೇ ವಾಹನದಲ್ಲಿ ಪ್ರಯಾಣಿಸುತ್ತಿರುವ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಹಿರಂಗವಾಗಿದೆ.
Advertisement
Advertisement
ಸಂಚಾರಿ ನಿಯಮದ ಪ್ರಕಾರ ಕಾರಲ್ಲಿ ಪ್ರಯಾಣಿಸುವಾಗ ಡ್ರೈವರ್ ಜೊತೆ ಸಹ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಒಂದು ಸಾವಿರ ರೂಪಾಯಿ ದಂಡ ವಿಧಿಸಬೇಕು. ಆದರೆ, ಕಾರಿನ ಮುಂದಿನ ಸೀಟ್‍ನಲ್ಲಿ ಕೂರುವ ಸಿಎಂ ಯಡಿಯೂರಪ್ಪನವರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ. ಇದನ್ನು ನೋಡಿಯೂ ಸಹ ಪೊಲೀಸರು ಸಿಎಂಗೆ ಸೆಲ್ಯೂಟ್ ಮಾಡಿ ಹಾಗೇ ಕಳಿಸಿಕೊಡುತ್ತಾರೆ. ಇದು ಒಂದು ದಿನದ ಕಥೆಯಲ್ಲ ಪ್ರತಿನಿತ್ಯವೂ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುತ್ತಾರೆ.
Advertisement
ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿ ದಿನ ಇದೇ ರೀತಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಇದು ಬಹಿರಂಗವಾಗಿದ್ದು, ಸೆಪ್ಟೆಂಬರ್ 4ರಂದು ಸೆರೆ ಹಿಡಿದಿದ್ದ ದೃಶ್ಯದಲ್ಲಿಯೂ ಸಹ ಬಿಎಸ್‍ವೈ ಸೀಟ್ ಬೆಲ್ಟ್ ಧರಿಸಿರಲಿಲ್ಲ. ನಿನ್ನೆಯ ದೃಶ್ಯದಲ್ಲಿಯೂ ಸಹ ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರ್ಯನಿಮಿತ್ತ ತಮ್ಮ ನಿವಾಸ ಧವಳಗಿರಿಯಿಂದ ಕಾರಲ್ಲಿ ಹೊರಟಾಗ ಯಥಾ ಪ್ರಕಾರ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸಿದ್ದರೂ ಪೊಲೀಸರೂ ಸಹ ಈ ಕುರಿತು ಗಮನ ಸೆಳೆಯಲಿಲ್ಲ.
Advertisement
ರಾಜ್ಯದ ಕಾನೂನು ತಮ್ಮ ಕೈಯಲ್ಲಿ ಹೊಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸೀಟ್ ಬೆಲ್ಟ್ ಹಾಕಿಕೊಳ್ಳುವುದಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಹಿರಂಗವಾಗಿದೆ.
ಟ್ರಾಫಿಕ್ ರೂಲ್ಸ್ ಫಾಲೋ ಮಾಡುವ ವಿಚಾರದಲ್ಲಿ ಕೇವಲ ಇವರಿಗಷ್ಟೇ ಉದಾಸೀನ ಇಲ್ಲ. ಉಳಿದ ರಾಜಕಾರಣಿಗಳು ಸಹ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಮುಂದಿದ್ದಾರೆ. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಕ್ಯಾಮರಾ ಕಣ್ಣಿಗೆ ಕಂಡಿದ್ದು ಈ ನಾಯಕರು ಮಾತ್ರ ಆದರೆ, ಪ್ರತಿ ನಿತ್ಯ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ.