ಪ್ರಾಕೃತಿಕ ಸಂಪತ್ತು ರಕ್ಷಿಸುವಲ್ಲಿ ಗಂಧದಗುಡಿ ಚಿತ್ರ ಪ್ರೇರಣೆ ನೀಡಲಿ: ಬೊಮ್ಮಾಯಿ

Public TV
2 Min Read
APPU BOMMAI

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಟೈಟಲ್ ಟೀಸರ್ ಇಂದು ಬಿಡುಗಡೆಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಹಾರೈಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಪ್ರಾಕೃತಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಜನರಿಗೆ ಈ ಚಿತ್ರ ಪ್ರೇರಣೆಯಾಗಲಿ ಎಂದು ಬರೆದುಕೊಂಡಿದ್ದಾರೆ.

GANDHADA GUDI 6

ಟ್ವೀಟ್ ನಲ್ಲೇನಿದೆ..?
ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜ್ ಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ.

ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

ಇಂದು ಅಪ್ಪು ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದೇ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ಪ್ರಯಾಣಿಸುವುದನ್ನು ಕಾಣಬಹುದಾಗಿದೆ. ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದರೆ ಕೊನೆಯಲ್ಲಿ ಡಾ. ರಾಜ್‌ಕುಮಾರ್ ಧ್ವನಿಯಲ್ಲಿ ಅರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂಬ ಸಂದೇಶ ಸಾರಲಾಗಿದೆ. ಅಮೋಘವರ್ಷ ನಿರ್ದೇಶನದ ಈ ಡಾಕ್ಯುಮೆಂಟರಿ ಸಿನಿಮಾ ಮುಂದಿನ ವರ್ಷ 2022ರಲ್ಲಿ ತೆರೆಕಾಣಲಿದೆ. ಇದನ್ನೂ ಓದಿ:   ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

Share This Article
Leave a Comment

Leave a Reply

Your email address will not be published. Required fields are marked *