ಬೆಂಗಳೂರು: ಸಂಪುಟ ಪುನಾರಚನೆ ವಿಚಾರ ವರಿಷ್ಠರ ಗಮನದಲ್ಲಿ ಇದೆ. ಪುನಾರಚನೆ ಯಾವಾಗ ಎಂದು ವರಿಷ್ಠರು ನಿರ್ಧರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕಾಂಕ್ಷಿಗಳು ಸಚಿವ ಸ್ಥಾನ ಕೇಳುವುದು ಸಹಜ. ಈ ಬಗ್ಗೆ ವರಿಷ್ಠರು ಯಾವಾಗ ಕರೆಯುತ್ತಾರೋ ಆಗ ಭೇಟಿ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
50% ನಿಯಮ ವಾಪಸ್‍ಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೋವಿಡ್ ಬಗ್ಗೆ ಕೆಲವು ನಿಯಮ ಮಾಡಿದ್ದೇವೆ. ಕೋವಿಡ್ ಸ್ಥಿತಿ ಗತಿ ಸಹ ನೋಡಬೇಕಾಗುತ್ತದೆ. ಯಾವುದೇ ನಿಯಮ ಇದ್ದರೂ ಅಧ್ಯಯನ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರಹಸ್ಯ ಸಭೆಗೆ ಪ್ರತಿಕ್ರಿಯೆ: ಇದೇ ಸಂದರ್ಭದಲ್ಲಿ ನಿಗಮ ಮಂಡಳಿ ವಿಚಾರವಾಗಿ ಮಾತನಾಡಿ, ಪಕ್ಷದ ವೇದಿಕೆಯಲ್ಲಿ ಕೂತು ರಾಜ್ಯಾಧ್ಯಕ್ಷರು ಚರ್ಚೆ ಮಾಡಿ ಹೇಳುತ್ತಾರೆ. ಆ ನಂತರ ನಿಗಮ ಮಂಡಳಿ ನೇಮಕ ಆಗುತ್ತದೆ. ಈ ಬಗ್ಗೆ ನನ್ನ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದ ಅವರು, ಬೆಳಗಾವಿ ರಹಸ್ಯ ಸಭೆ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಅದು ರಹಸ್ಯ ಸಭೆ ಅಂತಾ ನೀವು ಹೇಳುತ್ತೀರಾ. ಆದರೆ ಯಾರಾದರೂ ಸೇರಿದರೆ ಅದು ರಹಸ್ಯ ಸಭೆ ಆಗುತ್ತಾ? ಕಾಂಗ್ರೆಸ್‍ನಲ್ಲೂ ಹಲವು ಸಭೆಗಳು ಆಗುತ್ತವೆ. ಅವುಗಳನ್ನು ರಹಸ್ಯ ಸಭೆ ಅಂತಾ ಹೇಳುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ
6 ತಿಂಗಳ ಸಾಧನೆಯ ಕಿರುಪುಸ್ತಕ: ಜನವರಿ 28ಕ್ಕೆ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿ ಆರು ತಿಂಗಳ ವಿಚಾರಕ್ಕೆ ಬಗ್ಗೆ ಮಾತನಾಡಿದ ಅವರು ಆರು ತಿಂಗಳ ಅವಧಿ ಬಗ್ಗೆ ಸುದ್ದಿಗೋಷ್ಠಿ ಮಾಡಿ ವಿವರ ತಿಳಿಸುತ್ತೇನೆ. ಕಿರು ಪುಸ್ತಕದಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪ್ರಕಟಿಸುತ್ತೇವೆ ಎಂದ ಅವರು, ಬಜೆಟ್ ಸಿದ್ಧತೆ ಡಿಸೆಂಬರ್ ತಿಂಗಳಿಂದಲೇ ಪ್ರಾರಂಭಿಸಿದ್ದೆವು. ಆದರೆ ಕೋವಿಡ್ ಬಂದಿದ್ದರಿಂದ ಮತ್ತೆ ಮಾಡಲಿಲ್ಲ. ಜ. 25ರಂದು ಹಣಕಾಸು ಇಲಾಖೆ ಜೊತೆ ಸಭೆ ನಡೆಸುತ್ತೇನೆ. ತದನಂತರ ಆದಾಯ ಬರುವ ಇಲಾಖೆ ಮತ್ತು ಸಂಘ ಸಂಸ್ಥೆಗಳ ಜೊತೆ ಸಭೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಲಸಿಕೆ ಬೇಡವೆಂದು ಮನೆ ಏರಿದ್ದ ಯುವಕನ ಮನವೊಲಿಸಿದ ತಹಶೀಲ್ದಾರ್
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದೇವೆ. ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ