ಬೆಂಗಳೂರು: ರಾಜ್ಯದಲ್ಲಿ ಒಬ್ಬ ಅಮಾಯಕನ ಕೊಲೆಯಾದಾಗ ಆಕ್ರೋಶ ಇರುತ್ತೆ. ಕೇರಳ ಗಡಿ ದಾಟಿ ಕೊಲೆಗಾರರ ಹಿಡಿಯಲು ಹೋಂ ಮಿನಿಸ್ಟರ್, ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಇಲ್ಲದಿರುವಾಗ ಕೊಲೆ ನಡೆದಿದೆ. ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಒಂದು ವ್ಯವಸ್ಥಿತ ಸಂಚು. ಕ್ಷೋಬೆ ಉಂಟು ಮಾಡುವ ವರ್ಗದಿಂದ ಕೊಲೆ ಮಾಡಲಾಗಿದೆ. ಆ ವರ್ಗವನ್ನು ಸದೆ ಬಡಿಯುವ ಕೆಲಸ ಮಾಡ್ತೇವೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ – ಮೂರು ತಾಲೂಕು ಬಂದ್ಗೆ ಕರೆ
ಜನರಲ್ಲಿ ಆಕ್ರೋಶ ಇದೆ. ಜನರಿಗೆ ಶಾಂತಿ ಕಾಪಾಡಲು ಮನವಿ ಮಾಡಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕಾರುತ್ತಿಲ್ಲ. ಆ ಘಟನೆ ನಡೆಯಬಾರದಿತ್ತು ಅಂತ ಆಕ್ರೋಶ ಅವರದ್ದು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಿರುವ ಆಕ್ರೋಶಕ್ಕೆ ಸಿಎಂ ಸ್ಪಷ್ಟನೆ ನಿಡಿದರು.
ಏನಿದು ಪ್ರಕರಣ?: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು(31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದಾರೆ.