ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರು ಮತ್ತೆ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದು, ಈ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಚಿವರ ಮನವೊಲಿಕೆಗೆ ಮತ್ತೆ ಪ್ರಯತ್ನಿಸುತ್ತಿದ್ದಾರೆ.
ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾಗೆ ತಮ್ಮ ಆಪ್ತ ರಾಜೂಗೌಡ ಜೊತೆ ಕಾರಿನಲ್ಲಿ ಬಂದು ಸಿಎಂ ಭೇಟಿ ಮಾಡಿದ್ದಾರೆ. ಈ ವೇಳೆ ಸಿಎಂ ಮತ್ತೆ ಆನಂದ್ ಸಿಂಗ್ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ದೆಹಲಿಗೆ ಹೋಗಿ ಬರುವ ತನಕ ಸೈಲೆಂಟ್ ಆಗಿರುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಆದರೆ ಈ ಖಾತೆಯಿಂದ ಆನಂದ್ ಅಸಮಾಧಾನಗೊಂಡಿದ್ದು, ಈ ಹಿಂದೆಯೂ ರಾಜೀನಾಮೆಯ ಎಚ್ಚರಿಕೆ ನೀಡಿದ್ದರು. ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದು ಒಳಿತು ಎನ್ನುವದು ನನ್ನ ನಿಲುವು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುತ್ತೇನೆ ಕೊಡದೆ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದರು. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?
ಆ ಬಳಿಕ ಮುಖ್ಯಮಂತ್ರಿಯವರು ಆನಂದ್ ಸಿಂಗ್ ಅವರಿಗೆ ಮನವೊಲಿಕೆ ಮಾಡಿದ್ದರು. ಹೀಗಾಗಿ ಪ್ರಬಲ ಖಾತೆಗೆ ಬಿಗಿಪಟ್ಟು ಹಿಡಿದಿದ್ದ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಆನಂದ್ ಸಿಂಗ್, ರಾಜೀನಾಮೆ ನೀಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆ ಆಗಬೇಕೆಂದು ಹೇಳಿದ್ದು ನಿಜ. ಸಿಎಂ ನನ್ನ ಮಾತುಗಳನ್ನ ಕೇಳಿದ್ದು, ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು. ಇತ್ತ ಸಿಎಂ ಮಾತನಾಡಿ, ಖಾತೆಯ ಬದಲಾವಣೆಯ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆನಂದ್ ಸಿಂಗ್ ಭಾವನೆಗಳಿಗೆ ನಾವು ಸ್ಪಂದಿಸಿದ್ದು, ಅವರ ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.