ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿಗೆ ಹೋಗುತ್ತಿದ್ದಾರೆ. ಅಕ್ಟೋಬರ್ 8 ಮತ್ತು 9ರಂದು ಎರಡು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಸಿಎಂ ಬೊಮ್ಮಾಯಿಗೆ ಆ ಮೂರು ಸಂಕಟಗಳು ಪರಿಹಾರ ಆಗುತ್ತಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ದೆಹಲಿ ಭೇಟಿ ವೇಳೆ ಮೂರು ವಿಷಯಗಳ ಬಗ್ಗೆ ಹೈಕಮಾಂಡ್ ಜೊತೆಗೆ ಸಿಎಂ ಚರ್ಚಿಸುವ ಸಾಧ್ಯತೆ ಇದೆ.
ವಲಸಿಗರಲ್ಲಿ ಸಚಿವ ಸ್ಥಾನ ತಪ್ಪಿರುವವರಿಗೆ ಮಂತ್ರಿಗಿರಿ ಕೊಡಿಸಬೇಕಾದ ಸವಾಲುಗಳು ಹಾಗೂ ಆರ್ ಶಂಕರ್, ಶ್ರೀಮಂತ ಪಾಟೀಲ್‍ಗೆ ಸಚಿವ ಸ್ಥಾನ ಕೊಡುವಂತೆ ವಲಸಿಗರ ಒತ್ತಡದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಹುಲ್ ಗಾಂಧಿ ಲಖೀಂಪುರ್ ಭೇಟಿಗೆ ಅವಕಾಶವಿಲ್ಲವೆಂದ ಯೋಗಿ ಸರ್ಕಾರ
ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಸಂಕಟ ಎದುರಾಗಿದೆ. ಜಾರಕಿಹೊಳಿ ಕೇಸ್ ಬಗ್ಗೆ ಇನ್ನೂ ಹೈಕೋರ್ಟ್‍ನಲ್ಲಿ ವಿಚಾರಣೆ ನಡೀತಿದೆ. ಈ ಕುರಿತು ಕೂಡ ಸಿಎಂ ಹೈಕಮಾಂಡ್ ಜೊತೆ ಮಾತುಕತೆ ನಡೆಸುವ ಸಂಭವವಿದೆ. ಇಷ್ಟು ಮಾತ್ರವಲ್ಲದೆ ವಿಜಯೇಂದ್ರ, ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡಬೇಕಾದ ಸಂಕಟ ಕೂಡ ಸಿಎಂಗೆ ಎದುರಾಗಿದ್ದು, ಈ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.