ನವದೆಹಲಿ: ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟಿನ ಕಂತೆಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಾಗ್ದಂಡನೆ (ಮಹಾಭಿಯೋಗ) ವಿಧಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿದ್ದ ಶಿಫಾರಸು ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ಕಾಯ್ದಿರಿಸಿದೆ.
ಹಿಂದಿನ ಸಿಜೆಐ ರಚಿಸಿದ್ದ ಆಂತರಿಕ ಸಮಿತಿ ತಮಗೆ ಪ್ರತಿಕೂಲವಾದ ವರದಿ ನೀಡಿದ ಬಳಿಕ ತಡವಾಗಿ ನ್ಯಾ. ವರ್ಮಾ ಅವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅವರ ನಡೆ ವಿಶ್ವಾಸವನ್ನು ಮೂಡಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ತಿಳಿಸಿತು. ಇದನ್ನೂ ಓದಿ: ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ – ಅಶ್ವಿನಿ ವೈಷ್ಣವ್
ನ್ಯಾಯಮೂರ್ತಿ ವರ್ಮಾ ಅವರ ಪದಚ್ಯುತಿ ಕುರಿತಂತೆ ಸಂಸತ್ತು ಪರಿಗಣಿಸುತ್ತಿರುವುದರಿಂದ, ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸದೆ ಉಳಿಯಬಹುದು ಎಂಬ ಸುಳಿವನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ನೀಡಿತು.
ನೀವು ಎತ್ತುತ್ತಿರುವ ಪ್ರಶ್ನೆಗಳು ಪ್ರಮುಖವಾದವು, ಆದರೆ ಮೊದಲೇ ಕೇಳಬಹುದಿತ್ತು. ಹೀಗಾಗಿ ನಿಮ್ಮ ನಡೆ ವಿಶ್ವಾಸ ಮೂಡಿಸುವುದಿಲ್ಲ. ನಿಮ್ಮ ನಡವಳಿಕೆ ಬಹಳಷ್ಟು ಹೇಳುತ್ತದೆ. ಇಲ್ಲಿ ಏನಾದರೂ (ಮಾಹಿತಿ) ಸೋರಿಕೆಯಾಗುವುದನ್ನು ನೀವು ಬಯಸುವುದಿಲ್ಲ. ಸಂಸತ್ತು ನಿರ್ಧರಿಸಲಿ. ಅದು ನಿಮ್ಮ ಹಣವೋ ಅಲ್ಲವೋ ಎಂದು ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿ ಏಕೆ ನಿರ್ಧರಿಸಬೇಕು? ಅದು ಆಂತರಿಕ ಸಮಿತಿಯ ಕೆಲಸವಾಗಿರಲಿಲ್ಲ ಎಂದು ಪೀಠ ತಿಳಿಸಿತು.
ನ್ಯಾಯಮೂರ್ತಿಗಳ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಹಣದ ಮೂಲದ ಬಗ್ಗೆ ಆಂತರಿಕ ಸಮಿತಿ ಸಮಗ್ರ ತನಿಖೆ ನಡೆಸಿಲ್ಲ ಎಂಬ ನ್ಯಾಯಮೂರ್ತಿ ವರ್ಮಾ ಅವರ ನಿಲುವನ್ನು ಉಲ್ಲೇಖಿಸಿದ ಅದು ಈ ಮಾತುಗಳನ್ನು ಹೇಳಿತು. ಇದನ್ನೂ ಓದಿ: ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್
ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿರುವ ಶಿಫಾರಸು ಸಂವಿಧಾನ ಬಾಹಿರ ಮತ್ತು ಅದು ಅವರ ಅಧಿಕಾರ ವ್ಯಾಪ್ತಿ ಮೀರಿದ್ದು ಎಂಬುದಾಗಿ ಘೋಷಿಸಬೇಕು ಎಂದು ನ್ಯಾ. ವರ್ಮಾ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಯಾವುದೇ ಔಪಚಾರಿಕ ದೂರು ಇಲ್ಲದಿದ್ದರೂ ತಮ್ಮ ವಿರುದ್ಧ ಆಂತರಿಕ ಸಮಿತಿ ವರದಿ ನೀಡಿರುವುದು ಅನುಚಿತ ಮತ್ತು ಅಮಾನ್ಯವಾದುದು. ಅಲ್ಲದೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದರಿಂದ ತಾವು ಹಿಂದೆಂದೂ ನಡೆಯದಂತಹ ಮಾಧ್ಯಮ ವಿಚಾರಣೆಗೆ ತುತ್ತಾಗುವಂತಾಯಿತು ಎಂದು ಅವರು ದೂರಿದ್ದರು.