ನೆಲಮಂಗಲ: ಎರಡು ಚಿರತೆ ದಾಳಿಯಿಂದ ಸುಮಾರು 400 ನಾಟಿ ಕೋಳಿ ಸಾವನ್ನಪ್ಪಿದ್ದು, ಇದರಿಂದ ಶೆಡ್ ಮಾಲೀಕನಿಗೆ ಸುಮಾರು 50 ಸಾವಿರ ನಷ್ಟವಾಗಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕಲ್ಲಹಟ್ಟಿಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ಮಹೇಶ್ ಗೌಡ ಎಂಬವರಿಗೆ ಸೇರಿದ ಶೆಡ್‍ನಲ್ಲಿದ್ದ ಸುಮಾರು 400 ಕೋಳಿ ಸಾವನ್ನಪ್ಪಿದೆ. ಕಳೆದ ಕೆಲ ದಿನಗಳ ಹಿಂದೆ ಸುಮಾರು 3500 ಕೋಳಿಗಳನ್ನು ಶೆಡ್‍ನ ಮಾಲೀಕ ಮಾರಾಟ ಮಾಡಿದ್ದರು.
ರಾತ್ರಿ ವೇಳೆಯಲ್ಲಿ ಎರಡು ಚಿರತೆಯಿಂದ ದಾಳಿ ನಡೆದಿರುವ ಶಂಕೆಯನ್ನು ಶೆಡ್‍ನ ಮಾಲೀಕರು ವ್ಯಕ್ತಪಡಿಸುತ್ತಿದ್ದಾರೆ. ಚಿರತೆಗಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಸಹ ರೈತರ ಕುರಿಗಳನ್ನು ಕಚ್ಚಿವೆ. ಇದರಿಂದ ಸ್ಥಳೀಯರು ಅರಣ್ಯ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೂಕ್ತ ಬೋನ್ ಇಡುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪದೇ ಪದೇ ಈ ಗ್ರಾಮಗಳ ಸುತ್ತಮುತ್ತ ಚಿರತೆ ದಾಳಿಯಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.