– ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ ಮಾರಾಟಗಾರರು
ಶಿವಮೊಗ್ಗ: ಕೊರೊನಾ ಹಾಗೂ ಹಕ್ಕಿಜ್ವರ ಹಿನ್ನೆಲೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಇಂದಿನಿಂದ ಮಾರ್ಚ್ 31ರವರೆಗೆ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಸ್ಥಗಿತಗೊಳಿಸುತ್ತೇವೆ ಎಂದು ಮಾರಾಟಗಾರರು ಹೇಳಿದ್ದಾರೆ. ಕೊರೊನಾ ವೈರಸ್ ಈಗಾಗಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಇದರ ಜೊತೆಗೆ ಮೈಸೂರು ಹಾಗೂ ಹರಿಹರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸಾಗರದ ಕೋಳಿ ಮಾಂಸ ಮಾರಾಟಗಾರರು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಬಂದ್ ಮಾಡಿದ್ದಾರೆ.
ಅಲ್ಲದೇ ಅಂಗಡಿ ಹಾಗೂ ಮಾಂಸದ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮಾರಾಟಗಾರರು ಸ್ವಯಂ ಪ್ರೇರಿತವಾಗಿ ಬಂದ್‍ಗೊಳಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರಾಟಗಾರರು ಈ ನಿರ್ಧಾರ ತೆಗೆದುಕೊಂಡಿರೋದು ಒಳ್ಳೆಯ ಕೆಲಸ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಹಕ್ಕಿ ಜ್ವರ ಖಾತ್ರಿಯಾಗಿದೆ. ಕುಂಬಾರಕೊಪ್ಪಲಿನಲ್ಲಿ ಸಾಕಿದ ಕೋಳಿ ಹಾಗೂ ಕೊಕ್ಕರೆ ಸ್ಯಾಂಪಲ್‍ನಲ್ಲಿ ಜ್ವರ ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕಿ ಜ್ವರದ ಬಗ್ಗೆ ಇದೇ ತಿಂಗಳು 12 ರಂದು ಸ್ಯಾಂಪಲ್ ಕಳುಹಿಸಲಾಗಿತ್ತು. ಇದೀಗ ಇಂದು ಹಕ್ಕಿ ಜ್ವರ ಇರುವುದು ಖಚಿತವಾಗಿದೆ. ಹೀಗಾಗಿ ಸೋಂಕು ಬಂದಿರುವ ಸ್ಥಳದಲ್ಲಿ ಸಾಕಿರುವ ಹಕ್ಕಿಗಳನ್ನು ಸಾಯಿಸಬೇಕು. ಮನುಷ್ಯರಿಗೆ ಇದು ಹರಡುವುದಿಲ್ಲ. ಆದರೂ ಮುಂಜಾಗ್ರತವಾಗಿ ಹಕ್ಕಿಗಳನ್ನು ಸಾಯಿಸಬೇಕು ಎಂದು ತಿಳಿಸಿದ್ದರು.
ಸೋಂಕು ಪತ್ತೆಯಾದ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ನಾಳೆಯಿಂದ ಕೋಳಿ ಹಾಗೂ ಯಾವುದೇ ಪಕ್ಷಿಗಳನ್ನ ಮಾರಾಟ ಮಾಡುವಂತಿಲ್ಲ. ಸೋಂಕು ಪತ್ತೆಯಾದ 1 ಕಿ.ಮೀ ವ್ಯಾಪ್ತಿಯಲ್ಲಿ ತಿನ್ನುವಂತ ಪಕ್ಷಿಗಳನ್ನು ಸೇವನೆ ಮಾಡಬಾರದು ಎಂದಿದ್ದರು.
ಇತ್ತ ರಾಜ್ಯಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ 11 ಮಂದಿಗೆ ತಗುಲಿದ್ದು, ಈಗಾಗಲೇ ಕಲಬುರಗಿಯಲ್ಲಿ ಓರ್ವ ವೃದ್ಧರನ್ನು ಬಲಿ ಪಡೆದಿದೆ. ಇತ್ತ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, 39 ಮಂದಿಗೆ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಈವರೆಗೆ ವಿಶ್ವದಾದ್ಯಂತ ಬರೋಬ್ಬರಿ 7,171 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 1,82,605 ಮಂದಿಗೆ ಕೊರೊನಾ ತಗುಲಿದೆ ಎಂದು ವರದಿಯಾಗಿದೆ.