ಚಾಮರಾಜನಗರ: ಜಿಲ್ಲೆಯಾದ್ಯಂತ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಯನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ತೆರವುಗೊಳಿಸಲಾಗಿದ್ದು, ಕೆಲ ಷರತ್ತಿಗೆ ಒಳಪಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
Advertisement
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈ ವರೆಗೆ ಅಸ್ವಾಭಾವಿಕವಾಗಿ ಅಥವಾ ಕೋಳಿ ಶೀತ ಜ್ವರದಿಂದ ಪಕ್ಷಿಗಳಾಗಲಿ, ಕೋಳಿಗಳಾಗಲಿ ಮರಣ ಹೊಂದಿರುವುದು ಕಂಡುಬಂದಿಲ್ಲ ಹಾಗೂ ಮೈಸೂರು ನಗರವು ಚಾಮರಾಜನಗರದಿಂದ 70 ಕಿ.ಮೀ ದೂರದಲ್ಲಿದ್ದು, ಹಕ್ಕಿಜ್ವರ ಬಾರದಂತೆ ಕ್ರಮ ವಹಿಸಲಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾದ್ಯಂತ ಹೊರಡಿಸಿರುವ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆ ನಿಷೇಧದ ಆದೇಶವನ್ನು ಹಲವು ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement
Advertisement
ಕೋಳಿ ಮಾಂಸ ಮಾರಾಟ ಮಾಡುವ ಕೆಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗಾಜಿನ ಪೆಟ್ಟಿಗೆಯನ್ನು ಅಳವಡಿಸಿಕೊಂಡು ಕೋಳಿಮಾಂಸ ಮಾರಾಟ ಮಾಡಬೇಕು. ರೋಗ ತಗುಲಿದ ಕೋಳಿ, ಇತರೆ ಪಕ್ಷಿಗಳ ಮಾಂಸವನ್ನು ಮಾರಾಟ ಮಾಡಬಾರದು. ಕೋಳಿ ತ್ಯಾಜ್ಯವನ್ನು ಆಯಾ ದಿನವೇ ವಿಲೇವಾರಿ ಮಾಡಬೇಕು ಎಂದು ಡಿಸಿ ಷರತ್ತು ವಿಧಿಸಿದ್ದಾರೆ.