ಬಿಲಾಸ್‍ಪುರ: ಚುನಾವಣೆಯ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಸುವಾಗ ಜನ್ಮ ಸ್ಥಳದ ಕುರಿತು ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಛತ್ತೀಸ್‍ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಪುತ್ರ ಹಾಗೂ ಮಾಜಿ ಶಾಸಕ ಅಮಿತ್ ಜೋಗಿ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಮಿತ್ ಜೋಗಿ(42) ಅವರನ್ನು ಇಂದು ಬೆಳಗ್ಗೆ ಬಿಲಾಸ್‍ಪುರದ ಅವರ ನಿವಾಸದಲ್ಲಿ ಬಂಧಿಸಲಾಗಿದೆ. 2013ರ ಚುನಾವಣೆಯಲ್ಲಿ ಅಮಿತ್ ವಿರುದ್ಧ ಮರ್ವಾಹಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸಮೀರ್ ಪೈಕ್ರಾ ಅವರು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
Chhattisgarh: Police arrests Amit Jogi, son of former Chhattisgarh Chief Minister Ajit Jogi, from his residence in Bilaspur. More details awaited. pic.twitter.com/5e26dyDlBr
— ANI (@ANI) September 3, 2019
ಜೋಗಿ ಅವರು ತಮ್ಮ ಜಾತಿ ಹಾಗೂ ಜನ್ಮ ದಿನಾಂಕದ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ನ್ಯಾಯಾಲಯವು ಆ ವಿಧಾನಸಭೆಯ ಅವಧಿ ಪೂರ್ಣಗೊಂಡಿದೆ ಎಂದು ಅರ್ಜಿಯನ್ನು ವಜಾ ಮಾಡಿತ್ತು. ನಂತರ ಬಿಜೆಪಿ ನಾಯಕಿ ಮತ್ತೆ ಪೊಲೀಸರಿಗೆ ಹೊಸ ದೂರು ದಾಖಲಿಸಿದ್ದರು.
ಜೋಗಿ ಅವರು ತಮ್ಮ ಜನ್ಮ ದಿನಾಂಕ, ಸ್ಥಳವನ್ನು 1978 ಹಾಗೂ ಛತ್ತೀಸ್‍ಗಢದ ಸರ್ಬೆಹೆರಾ ಗೌರೆಲಾ ಗ್ರಾಮ ಎಂದು ತಪ್ಪಾಗಿ ಘೋಷಿಸಿದ್ದಾರೆ. ಆದರೆ, ಅವರ ನಿಜವಾದ ಜನ್ಮ ದಿನಾಂಕ ಹಾಗೂ ಸ್ಥಳ 1977 ಹಾಗೂ ಟೆಕ್ಸಾಸ್‍ನಲ್ಲಿ ಜನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮಿತ್ ಜೋಗಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು. ಜೋಗಿ ಅವರ ಜನ್ಮಸ್ಥಳದ ಕುರಿತು ಚುನಾವಣಾ ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಧ್ರುವ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.