ಛತ್ತೀಸ್‍ಗಡ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

Public TV
2 Min Read
BHUPESH BAGHEL

ರಾಯ್‍ಪುರ: ತೀವ್ರ ಪೈಪೋಟಿ ಹೊಂದಿದ್ದ ಛತ್ತೀಸ್‍ಗಡ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಅಂತಿಮವಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.

ಮಂಗಳವಾರ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತಕ್ಕೆ 45 ಸ್ಥಾನಗಳು ಬೇಕಾಗಿತ್ತು. ಕಾಂಗ್ರೆಸ್ ಈ ಬಾರಿ ಬರೋಬ್ಬರಿ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಸುಲಭವಾಗಿ ಬಹುಮತ ಸಾಧಿಸಿತ್ತು.

ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಆಯ್ಕೆ ವಿಚಾರ ನಿದ್ದೆಗೆಡಿಸಿತ್ತು. ಏಕೆಂದರೆ ವಿಧಾನಸಭಾ ವಿರೋಧ ಪಕ್ಷ ನಾಯಕರಾಗಿದ್ದ ಟಿ.ಎಸ್.ಸಿಂಗ್ದೇವ್ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭೂಪೇಶ್ ಬಘೇಲ್ ನಡುವೆ ತೀವ್ರ ಸ್ಪರ್ಧೆ ಏರ್ಪಟಿತ್ತು. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

ಭಾನುವಾರ ನವದೆಹಲಿಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕೈ ನಾಯಕರ ಸಭೆ ನಡೆದಿತ್ತು. ಬಳಿಕ ರಾಜಧಾನಿಯ ರಾಯ್‍ಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಒಮ್ಮತ ನಿರ್ಧಾರ ತೆಗೆದುಕೊಂಡು, ಅಂತಿಮವಾಗಿ ಹೈಕಮಾಂಡ್ ಹಾಗೂ ಸಭೆಯ ತೀರ್ಮಾನದಂತೆ ಭೂಪೇಶ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೋಮವಾರ ಛತ್ತೀಸ್ ಗಡ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಯಾರಿದು ಭೂಪೇಶ್ ಬಘೇಲ್?
ಭೂಪೇಶ್ ಹಿಂದುಳಿದ ವರ್ಗದ ಕುರ್ಮಿ ಸಮುದಾಯಕ್ಕೆ ಸೇರಿದ ನಾಯಕ. ಈ ಹಿಂದೆ ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್ ಕ್ಯಾಬಿನೆಟ್‍ನಲ್ಲಿ ಹಾಗೂ 2000ನೇ ಇಸವಿಯಲ್ಲಿ ಅಜಿತ್ ಜೋಗಿ ನೇತೃತ್ವದ ಛತ್ತೀಸ್‍ಗಡ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಇವರು, 2013ರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ರಾಜ್ಯದಲ್ಲಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಪಟನ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಬಿಜೆಪಿಯ ಮೋತಿಲಾಲ್ ಸಾಹು ವಿರುದ್ಧ 27,477 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

bhupesh baghel 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article