– ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡ ಪತ್ನಿ
ರಾಯ್ಪರ್: ಕುಡಿದು ಗಲಾಟೆ ಮಾಡಬೇಡ ಎಂದಿದ್ದಕ್ಕೆ ತಾಯಿಯನ್ನು ಮಗನೋರ್ವ ಸಾಯುವರೆಗೆ ದೊಣ್ಣೆಯಿಂದ ಹೊಡೆದಿರುವ ಘಟನೆ ಚತ್ತೀಸ್‍ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ನಡೆದಿದೆ.
ತಾಯಿಯನ್ನೇ ಹೊಡೆದು ಕೊಂದ ಪಾಪಿ ಮಗನನ್ನು ಅಮೃತ್ ಲಾಲ್ ಗಡೆವಾಲ್ ಎಂದು ಗುರುತಿಸಲಾಗಿದೆ. ಮದ್ಯಪಾನಕ್ಕೆ ದಾಸನಾಗಿದ್ದ ಅಮೃತ್ ಲಾಲ್ ಲಾಕ್‍ಡೌನ್‍ನಿಂದ ಮದ್ಯದಂಗಡಿ ಮುಚ್ಚಿದ ದಿನದಿಂದಲೂ ಸಮ್ಮನೆ ಇದ್ದ. ಆದರೆ ಸೋಮವಾರದಿಂದ ಬಾರ್ ಗಳು ಓಪನ್ ಆದ ಕಾರಣ ಇಂದು ಕಂಠಪೂರ್ತಿ ಕುಡಿದು ಬಂದಿದ್ದಾನೆ.
ಬಂದವನೇ ಅಮೃತ್ ಲಾಲ್ ತನ್ನ ಗ್ರಾಮವಾದ ಪುಟ್ಪುರದಲ್ಲಿ ಜನರಿಗೆ ತೊಂದರೆ ಕೊಡಲು ಆರಂಭಿಸಿದ್ದಾನೆ. ಜೊತೆಗೆ ರಸ್ತೆಯಲ್ಲಿ ನಿಂತುಕೊಂಡು ಓಡಾಡುವ ಮಂದಿ ಜೊತೆ ಜಗಳವಾಡಿದ್ದಾನೆ. ಕುಡುಕನ ತೊಂದರೆಯನ್ನು ಸಹಿಸಿಕೊಳ್ಳದ ಗ್ರಾಮಸ್ಥರು ಹೇಗೋ ಆತನ ಮನವೊಲಿಸಿ ಮನೆಗೆ ಹೋಗುವಂತೆ ಹೇಳಿದ್ದಾರೆ. ನಂತರ ಅಮೃತ್ ಲಾಲ್ ಮನೆಗೆ ಬಂದಿದ್ದಾನೆ.
ಮನೆಗೆ ಬಂದವ ಮನೆಯ ಮುಂದೆ ಕೂಡ ಗಲಾಟೆ ಮಾಡಿ ಅಕ್ಕಪಕ್ಕದ ಮನೆಯವರ ಜೊತೆ ಜಗಳಕ್ಕೆ ಹೋಗಿದ್ದಾನೆ. ಈ ವೇಳೆ ಆತನ ಪತ್ನಿ ಹಾಗೂ ವೃದ್ಧೆ ತಾಯಿ ಮನೆಯೊಳಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಲಾಲ್ ದೊಣ್ಣೆ ತೆಗೆದುಕೊಂಡು ಇಬ್ಬರಿಗೂ ಹೊಡೆಯಲು ಆರಂಭಿಸಿದ್ದಾನೆ. ಈ ವೇಳೆ ಪತ್ನಿ ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಆದರೆ ಅಮೃತ್ ಲಾಲ್ ತಾಯಿಯನ್ನು ದೊಣ್ಣೆಯಿಂದ ಹೊಡೆದು ಸ್ಥಳದಲ್ಲೇ ಕೊಂದು ಹಾಕಿದ್ದಾನೆ.
ಇದಾದ ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಘಟನಾ ಸ್ಥಳದಲ್ಲೇ ಇದ್ದ ಅಮೃತ್ ಲಾಲ್ ನನ್ನು ಬಂಧಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.