ಫ್ಯಾಟ್ ಸರ್ಜರಿಗೆ ಒಳಗಾಗಿ ಪ್ರಾಣ ಬಿಟ್ಟ ಕಿರುತೆರೆ ನಟಿ ಚೇತನಾ ರಾಜ್, ಆ ಚಿಕಿತ್ಸೆಗಾಗಿ ಒಂದು ಲಕ್ಷ, ಅರವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರ ದೊಡ್ಡಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಒಳಗಾಗುವ ಮುನ್ನ ಆ ಖಾಸಗಿ ಆಸ್ಪತ್ರೆಯು 90 ಸಾವಿರ ರೂಪಾಯಿಗಳನ್ನು ಕಟ್ಟಿಸಿಕೊಂಡಿತ್ತಂತೆ. ಆನಂತರ ಮತ್ತಷ್ಟು ಹಣವನ್ನು ಅವರ ಕುಟುಂಬ ಪಾವತಿಸಿದೆ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಚೇತನಾ ದೊಡ್ಡಪ್ಪ, ‘ಚೇತನಾ ರಾಜ್ ಈ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಕೂಡಿಸಿಟ್ಟಿದ್ದರು. ಚಿಕಿತ್ಸೆಗೂ ಮುನ್ನ 90 ಸಾವಿರ ರೂಪಾಯಿಗಳನ್ನು ಪಾವತಿಸಿದ್ದಾರೆ. ಆನಂತರ ಅವರ ಕುಟುಂಬ ಮತ್ತಷ್ಟು ಹಣವನ್ನು ಪಾವತಿಸಿದೆ. ಅವಳನ್ನು ಬೇರೆ ಆಸ್ಪತ್ರೆಗೆ ಸೇರಿಸುವ ಮುನ್ನವೂ ತಾವು ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಆಸ್ಪತ್ರೆಗೆ ಹಣ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಚೇತನಾ ರಾಜ್ ಅವರ ತಾಯಿಯೂ ಕೂಡ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ‘ಮಗಳಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡು, ಬದುಕಿಸಲಿಲ್ಲ. ದುಡ್ಡಿನ ಜೊತೆ ಮಗಳನ್ನೂ ಅವರು ಕಸಿದುಕೊಂಡರು ಎಂದು ಆರೋಪ ಮಾಡಿದ್ದಾರೆ. ಅಲ್ಲದೇ, ಮಗಳ ಸಾವಿಗೆ ಆಸ್ಪತ್ರೆಯೇ ಕಾರಣವೆಂದು ದೂರು ಕೂಡ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
ಈ ಕುರಿತು ಆಸ್ಪತ್ರೆಯು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೇತನಾ ರಾಜ್ ಅವರ ಮರಣೋತ್ತರ ಪರೀಕ್ಷೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಆನಂತರ ಚೇತನಾ ರಾಜ್ ಸಾವಿನ ಹಲವು ವಿಚಾರಗಳು ತಿಳಿಯಲಿವೆ. ಈಗಾಗಲೇ ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.