4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

Public TV
2 Min Read
CHENNAI TECHIE

ಚೆನ್ನೈ: ಕೆಲದಿನಗಳ ಹಿಂದೆ ಪುಟ್ಟ ಕಂದಮ್ಮವೊಂದು ಅಪಾರ್ಟ್‌ ಮೆಂಟ್‌ನ ಬಾಲ್ಕನಿಯಿಂದ ಸನ್ ಶೇಡ್ ಮೇಲೆ ಬಿದ್ದಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಈ ಮಿರಾಕಲ್ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೌದು. ಆಕಸ್ಮಿಕವಾಗಿ ತನ್ನ ಕೈಯಿಂದ ಜಾರಿ ಮಗು ಅಪಾರ್ಟ್‌ ಮೆಂಟ್‌ ಬಾಲ್ಕನಿಯಲ್ಲಿ (Apartment Balcony) ಬಿದ್ದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಿಂದನೆ ವ್ಯಕ್ತವಾಗಿದ್ದರಿಂದ ಮನನೊಂದು ಟೆಕ್ಕಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರಿನ (Coimbatore) ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಸಾವಿನ ದಾರಿ ಹಿಡಿದಿದ್ದಾರೆ.

ರಮ್ಯಾ (Techie Ramya) ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವೇ ಕಾದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಅಂದು ನಡೆದಿದ್ದೇನು..?: ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾದರು.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು.

ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article