– ಎಂಜಿನಿಯರಿಂಗ್ ವಿದ್ಯಾರ್ಥಿಯ ಎದೆಗೆ ಚಾಕು ಇರಿದ ಖದೀಮರು
_ ಅರ್ಧ ಕಿ.ಮೀ ಹೋಗಿ ಇನ್ನೊಬ್ಬರಿಗೆ ಚಾಕು ಇರಿದ್ರು
ಚೆನ್ನೈ: ಫೋನ್ ಕಿತ್ತುಕೊಳ್ಳಲು ಬಂದ ಮೂವರು ಖದೀಮರಿಗೆ ವಿರೋಧ ಮಾಡಿದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸುಲೂರ್ ಎಂಬಲ್ಲಿ ನಡೆದಿದೆ.
ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ಜಿ.ಆರ್.ಜಿ ಕಾಲೇಜಿನಲ್ಲಿ ಮೂರನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ತಮಿಳು ಸೆಲ್ವನ್ ಎಂದು ಗುರುತಿಸಲಾಗಿದೆ. ಕಾಲೇಜಿನಿಂದ ಪ್ರಾಜೆಕ್ಟ್ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ಸೆಲ್ವನ್ ಅನ್ನು ದಾರಿ ಮಧ್ಯದಲ್ಲಿ ಬೈಕಿನಲ್ಲಿ ಬಂದ ಮೂವರು ಅಡ್ಡಗಟ್ಟಿ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ವಿರೋಧ ಮಾಡಿದ ವಿದ್ಯಾರ್ಥಿ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.
Advertisement
Advertisement
ಕಳ್ಳರು ಮೊಬೈಲ್ ಕಿತ್ತುಕೊಳ್ಳಲು ಮುಂದಾದಾಗ ಸೆಲ್ವನ್ ಕಿರುಚಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಖದೀಮರು ಆತನ ಎದೆಗೆ ಚೂರಿ ಹಾಕಿ ಮೊಬೈಲ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ. ಆನಂತರ ಸೆಲ್ವನ್ ಮನೆಗೆ ಬಂದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೆಲ್ವನ್ ಅನ್ನು ಆತನ ತಂದೆ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ವಿಪರೀತ ರಕ್ತಸ್ರಾವ ಆಗಿದ್ದ ಕಾರಣ ಸೆಲ್ವನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Advertisement
ಪೊಲೀಸರ ಮಾಹಿತಿ ಪ್ರಕಾರ, ಸೆಲ್ವನ್‍ಗೆ ಚಾಕು ಹಾಕಿ ಫೋನ್ ಕಿತ್ತುಕೊಂಡು ಪರಾರಿಯಾದ ಮೂವರು ಆರೋಪಿಗಳು, ಅರ್ಧ ಕಿ.ಮೀ ಮುಂದೇ ಹೋಗಿ ಮತ್ತೆ ಇನ್ನೊಂದು ದರೋಡೆ ಮಾಡಿದ್ದಾರೆ. 25 ವರ್ಷದ ಮಹಾಲಿಂಗಂ ಬೈಕಿನಲ್ಲಿ ಹೋಗುತ್ತಿದ್ದಾಗ ವಿಳಾಸ ಕೇಳುವ ಸೋಗಿನಲ್ಲಿ ಅಡ್ಡಹಾಕಿದ್ದಾರೆ. ಈ ವೇಳೆ ಓರ್ವ ಆರೋಪಿ ಆತನ ಜೇಬಿಗೆ ಕೈಹಾಕಿ ಮೊಬೈಲ್ ಕಿತ್ತುಕೊಳ್ಳಲು ಪಯತ್ನಿಸಿದ್ದಾನೆ. ಇದಕ್ಕೆ ವಿರೋಧ ಮಾಡಿದ ಮಹಾಲಿಂಗಂಗು ಬೆನ್ನಿಗೆ ಚಾಕು ಇರಿದು ಫೋನ್ ಮತ್ತು ಬೈಕ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
Advertisement
ಮಹಾಲಿಂಗಂ ಸಹಾಯಕ್ಕಾಗಿ ಕಿರುಚಿದಾಗ ದಾರಿಯಲ್ಲಿ ಹೋಗುತ್ತಿದ್ದ ಕ್ಯಾಬ್ ಚಾಲಕ ಆರೋಪಿಗಳನ್ನು ಕಾರಿನಲ್ಲಿ ಬೆನ್ನಟ್ಟಿದ್ದಾರೆ. ಆದರೆ ಆರೋಪಿಗಳು ಬೈಕನ್ನು ಬಿಟ್ಟು ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಮಹಾಲಿಂಗಂ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೊಯಮತ್ತೂರಿನಲ್ಲಿ 2019 ರ ನವೆಂಬರ್ ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಮೊಬೈಲ್ ಅನ್ನು ಬೈಕಿನಲ್ಲಿ ಬಂದ ಮೂವರು ಕಿತ್ತುಕೊಂಡು ಪರಾರಿಯಾಗಿದ್ದರು. ಇದಾದ ಮರುದಿನವೇ ಇದೇ ಮೂವರು ಮನೆಯೊಂದಕ್ಕೆ ನುಗ್ಗಿ ವೃದ್ಧೆಯೊಬ್ಬರ ಚೈನ್ ಕಿತ್ತುಕೊಂಡಿದ್ದರು. ಇದಾದ ಬಳಿಕ ಮೂರು ವಿಶೇಷ ಪೊಲೀಸ್ ತಂಡ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿತ್ತು.