ಚೆನ್ನೈ: ಬುಧವಾರದಂದು ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ಸ್ ಶೋರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಆದ್ರೆ ಶೋರೂಮ್ ಒಳಗಿದ್ದ ಸೇಫ್ಟಿ ಲಾಕರ್ ‘ಸೇಫ್’ ಆಗಿರಬಹುದು ಎಂಬ ವಿಶ್ವಾಸದಲ್ಲಿ ಮಾಲೀಕರಿದ್ದಾರೆ.
ಯಾಕಂದ್ರೆ ಈ ಲಾಕರ್‍ನಲ್ಲಿರೋದು ಬರೋಬ್ಬರಿ 400 ಕೆಜಿಯಷ್ಟು ಚಿನ್ನ ಹಾಗೂ 20 ಕೋಟಿ ರೂ. ಮೌಲ್ಯದ ವಜ್ರ. ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿರೋ ಚಿನ್ನ ಹಾಗೂ ವಜ್ರಾಭರಣಗಳಿಗಾಗಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಕಟ್ಟಡದ ಕೆಳಮಹಡಿಯಲ್ಲಿದ್ದ ಆಭರಣಗಳ ಅಂಗಡಿಯಲ್ಲಿ ಸೇಫ್ಟಿ ಲಾಕರ್ ಇತ್ತು. ಈ ಲಾಕರ್ ಎಂತಹ ಅಗ್ನಿ ಅವಘಡವಾದ್ರೂ ತಡೆದುಕೊಳ್ಳಬಹುದಾಗಿದೆ ಎಂಬ ನಂಬಿಕೆಯಲ್ಲಿ ಮಾಲೀಕರಿದ್ದಾರೆ.
ಬುಧವಾರದಂದು ಸಂಭವಿಸಿದ ಅಗ್ನಿ ದುರಂತದ ಪರಿಣಾಮ ಅಂಗಡಿಯಲ್ಲಿದ್ದ ಸುಮಾರು 80 ಕೋಟಿ ರೂ. ಮೌಲ್ಯದ ಜವಳಿ ಸುಟ್ಟು ಭಸ್ಮವಾಗಿದೆ. ಆದ್ರೆ ಇನ್ಶೂರೆನ್ಸ್ ಇರುವ ಕಾರಣ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.