ಚೆನ್ನೈ: ತಮ್ಮ ಕುಟುಂಬದಿಂದ ದೂರಾಗಿದ್ದ 45 ಹೆಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು, ಆಶ್ರಯ ನೀಡುವ ಮೂಲಕ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಹೆಚ್‍ಐವಿ ಪೀಡಿತ ಮಕ್ಕಳನ್ನು ಅವರ ಹೆತ್ತವರು ಬಿಟ್ಟು ಹೋಗಿರುತ್ತಾರೆ. ಇಂತಹ ಮಕ್ಕಳು ಇರಲು ಜಾಗವಿಲ್ಲದೆ, ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಕಷ್ಟಪಡುತ್ತಿರುತ್ತಾರೆ. ಇಂತಹ ಮಕ್ಕಳನ್ನು ಚೆನ್ನೈ ಮೂಲದ ಸಲೋಮನ್ ರಾಜ್ ದತ್ತು ಪಡೆದು ಆಶ್ರಯ ನೀಡಿದ್ದಾರೆ. ಅಲ್ಲದೆ ಮಕ್ಕಳಿಗೆ ತಂದೆ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಳ್ಳುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಸಲೋಮನ್, ನಮಗೆ ಮದುವೆಯಾಗಿ 8 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ನಾವು ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದೆವು. ಆದರೆ ನಾವು ಈ ನಿರ್ಧಾರ ಮಾಡಿದ ಬಳಿಕ ನಮಗೆ ಮಕ್ಕಳಾದವು. ಆದ್ದರಿಂದ ದತ್ತು ಪಡೆಯುವ ಆಲೋಚನೆಯನ್ನು ಕೈ ಬಿಟ್ಟಿದ್ದೆವು. ಎಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹಬೇಕೆನ್ನುವ ಆಸೆ ನನಗಿತ್ತು. ಹೀಗಾಗಿ ಈ ವಿಚಾರ ನನಗೆ ಬಹಳ ದಿನದವರೆಗೆ ಕಾಡುತ್ತಿತ್ತು. ಬಳಿಕ ದೃಢ ನಿರ್ಧಾರ ಮಾಡಿ ಮೊದಲು ಒಂದು ಎಚ್‍ಐವಿ ಪೀಡಿತ ಮಗುವನ್ನು ದತ್ತು ಪಡೆದೆ. ಬಳಿಕ ಅದು ಹಾಗೆ ಮುಂದುವರಿಯಿತು. ಈಗ ನಾನು 45 ಎಚ್‍ಐವಿ ಪೀಡಿತ ಮಕ್ಕಳಿಗೆ ತಂದೆ ಆಗಿದ್ದೇನೆ ಎಂದು ಖುಷಿ ಹಂಚಿಕೊಂಡರು.
Advertisement
Advertisement
ಈ ಮಕ್ಕಳ ಬಾಯಲ್ಲಿ ಅಪ್ಪ ಎಂದು ಕರೆಸಿಕೊಳ್ಳಲು ಖುಷಿಯಾಗುತ್ತೆ. ಈ ಮಕ್ಕಳನ್ನು ದತ್ತು ಪಡೆದು ಸಾಕುವುದರಲ್ಲಿ ನನಗೆ ನೆಮ್ಮದಿ ಸಿಕ್ಕಿದೆ. ಈ ಮಕ್ಕಳಿಗೆ ಆಶ್ರಯ ನೀಡಿ, ಬೇಕಾದ ಸೌಲಭ್ಯವನ್ನು ನಾನು ಒದಗಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಡ್ಯಾನ್ಸ್, ಕಂಪ್ಯೂಟರ್ ಶಿಕ್ಷಣವನ್ನೂ ಕೂಡ ಕೊಡಿಸುತ್ತಿದ್ದೇನೆ.
ಈ ಮಕ್ಕಳಲ್ಲಿ ಹಲವರು ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹಾಗೆಯೇ 7 ಮಂದಿ ಬೇರೆ ಬೇರೆ ವಿಷಯದಲ್ಲಿ ಪದವಿ ಶಿಕ್ಷಣವನ್ನೂ ಕೂಡ ಪಡೆಯುತ್ತಿದ್ದಾರೆ. ಅಲ್ಲದೆ ಈಗ ಪಿಯುಸಿ ಕಲಿಯುತ್ತಿರುವ ಒಬ್ಬಳು ಹುಡುಗಿ ಮುಂದೆ ಡಾಕ್ಟರ್ ಆಗಬೇಕೆಂದು ಆಸೆ ಪಟ್ಟಿದ್ದಾಳೆ. ತನ್ನಂತ ಇತರೆ ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂಬುದು ಬಯಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
Chennai: Solomon Raj has adopted 45 HIV positive children abandoned by their families; says, “These children are the innocent victims of someone else's fault. I’ve become "appa" for 45 children. It's big responsibility to take care of all the needs of these children.” #TamilNadu pic.twitter.com/VY3uvrE8WW
— ANI (@ANI) June 10, 2019
ಅಲ್ಲದೆ ಕೆಲವೊಮ್ಮೆ ಮಕ್ಕಳನ್ನು ನೋಡಿಕೊಳ್ಳುವುದು, ಅವರ ಔಷಧಿಯ ವೆಚ್ಚ ಬರಿಸಲು ಕಷ್ಟವಾಗುತ್ತೆ. ಕೆಲವೊಮ್ಮೆ ಅವರು ತೀರಾ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು. ಹೆಚ್‍ಐವಿ ಪೀಡಿತ ಮಕ್ಕಳನ್ನು ಕೆಲವು ತಂದೆ ತಾಯಿಯರು ನಡು ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ಸಲೋಮನ್ ಅವರು ಇಂತಹ ಮಕ್ಕಳಿಗೆ ಜೀವನ ರೂಪಿಸಿಕೊಟ್ಟು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.