ಚೆನ್ನೈ: 10 ವರ್ಷದ ಬಾಲಕಿಯೊಬ್ಬಳು ಬ್ರೈನ್ ಟ್ಯೂಮರ್ ಆಪರೇಷನ್ ಗೆ ಒಳಗಾಗಿದ್ದು, ಈ ವೇಳೆ ಆಕೆ ಕ್ಯಾಂಡಿ ಕ್ರಶ್ ಗೇಮ್ಸ್ ಆಡಿದ್ದಾಳೆ.
5ನೇ ತರಗತಿ ಓದುತ್ತಿದ್ದ ನಂದಿನಿ ಶಸ್ತ್ರಚಿಕಿತ್ಸಗೆ ಒಳಗಾದ ಬಾಲಕಿ. ಭರತನಾಟ್ಯ ಮಾಡುತ್ತಿದ್ದ ನಂದಿನಿ ಆರೋಗ್ಯ ಇದ್ದಕ್ಕಿದ್ದಂತೆ ಕೆಡುತಿತ್ತು. ಹೀಗಾಗಿ ಆಕೆಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆಕೆಯ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಬ್ರೈನ್ ಟ್ಯೂಮರ್ ಇದೆ ಎನ್ನುವುದು ತಿಳಿದು ಬಂದಿದೆ.
ಆಪರೇಷನ್ ಈಗಲೇ ನಡೆಸದೇ ಇದ್ದರೆ ಮುಂದೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದಾಗ ನಂದಿನಿಯ ಪೋಷಕರು ಆರಂಭದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ ಪುದುಚೇರಿಯಲ್ಲಿರುವ ಬಾಲಕಿಯ ಸಂಬಂಧಿಯೊಬ್ಬರನ್ನು ವೈದ್ಯರು ಆಸ್ಪತ್ರೆಗೆ ಕರೆಸಿದ್ದರು. ಸಂಬಂಧಿ ವೈದ್ಯರಾಗಿದ್ದ ಕಾರಣ ಸಹಾಯವನ್ನು ಪಡೆದು ಪೋಷಕರ ಮನವೊಲಿಸಿದ ಚೆನ್ನೈ ವೈದ್ಯರು ಯಶಸ್ವಿಯಾಗಿ ಸರ್ಜರಿ ನಡೆಸಿದ್ದಾರೆ.
ಗೆಡ್ಡೆಯನ್ನು ಹೊರ ತೆಗೆಯುವಾಗ ನಾನು ಅಲ್ಲಿಯೇ ಇದ್ದೆ. ನಂದಿನಿ ನನ್ನ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಆಡುತ್ತಿದ್ದಳು. ನಂದಿನಿಗೆ ಸರ್ಜರಿ ಮಾಡುವಾಗ ಅದು ಅರಿವಾಗಬಾರದು ಎಂದು ವೈದ್ಯರು ನಿರ್ಧರಿಸಿದ್ದರು. ಆದರೆ ಬಾಲಕಿ ತುಂಬಾ ಧೈರ್ಯವಾಗಿದ್ದಳು ಎಂದು ಆಕೆಯ ಸಂಬಂಧಿ ತಿಳಿಸಿದ್ದಾರೆ.
ಗೇಮ್ಸ್ ಆಡಿದ್ದು ಯಾಕೆ? ಈ ಆಪರೇಷನ್ ನಡೆಸುವಾಗ ಮೆದುಳು ಚಲನೆಯಲ್ಲಿರಬೇಕಾಗುತ್ತದೆ. ಹೀಗಾಗಿ ಮೆದುಳು ಚಲನೆಯಲ್ಲಿರಲು ಆಕೆಗೆ ಕ್ಯಾಂಡಿ ಕ್ರಾಶ್ ಗೇಮ್ಸ್ ಅಡಲು ವೈದ್ಯರು ಸೂಚಿಸಿದ್ದರು.