ಚೆನ್ನೈ: ಸೀಲ್ ಮಾಡಿದ್ದ ಬೋಬಾ ಟೀ (Boba Tea) ಬಾಟಲಿಯಲ್ಲಿದ್ದ ಗಾಜಿನ ತುಂಡನ್ನು ಐಸ್ ಕ್ಯೂಬ್ ಎಂದು ಭಾವಿಸಿ ಕುಡಿದಿದ್ದ ಯುವತಿಯೊಬ್ಬಳು ಆಸ್ಪತ್ರೆಗೆ ದಾಖಲಾದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ.
ಏಪ್ರಿಲ್ 27 ರಂದು ಯುವತಿಯ ತಾಯಿ ಅಂತಾರಾಷ್ಟ್ರೀಯ ಇತಿಹಾಸ ಶಿಕ್ಷಕಿ ಜಾಹ್ನವಿ ಸಂಘವಿ, ತೋರೈಪಕ್ಕಂನಲ್ಲಿರುವ ಫ್ರೋಜನ್ ಬಾಟಲ್ (Frozen Bottle) ಔಟ್ಲೆಟ್ನಿಂದ ಬೋಬಾ ಟೀಯನ್ನು ಖರೀದಿಸಿದ್ದರು. ಅದನ್ನು ಅವರ ಮಗಳು ಕುಡಿದಿದ್ದಳು. ಬಾಯಿಗೆ ಗಾಜಿನ ತುಂಡುಗಳು ಹೋಗುತ್ತಿದ್ದಂತೆ, ಆಕೆ ಹೊರಗೆ ಉಗುಳಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ
ಈ ಬಗ್ಗೆ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿರುವ ಜಾಹ್ನವಿ, ಮರುದಿನ ತಮ್ಮ ಮಗಳು ವಾಂತಿ ಮಾಡಲು ಪ್ರಾರಂಭಿಸಿದಳು. ಮತ್ತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಾನು ಕಂಪನಿಯನ್ನು ಸಂಪರ್ಕಸಿದೆ. ಈ ವೇಳೆ, ಕಂಪನಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಮತ್ತು ಆಸ್ಪತ್ರೆಯ ವೆಚ್ಚವನ್ನು ಸರಿದೂಗಿಸುತ್ತದೆ ಎಂದು ಭರವಸೆ ನೀಡಿತ್ತು. ನಾನು ಅಗತ್ಯವಿರುವ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತಕ್ಷಣವೇ ಸಲ್ಲಿಸಿದೆ. ಈಗ 20 ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಂಪನಿ ನನ್ನ ಕರೆಗಳು ಮತ್ತು ಇಮೇಲ್ಗಳನ್ನು ನಿರ್ಲಕ್ಷಿಸುತ್ತಿದೆ. ಈ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದು ಅವರ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಕಂಪನಿಯು, ತಿಂಗಳಿಗೆ 2.5 ಕೋಟಿಗೂ ಹೆಚ್ಚು ಬಾಟಲಿಗಳನ್ನು ತಯಾರಿಸುತ್ತದೆ. ಅಂತಹ ಒಂದು ಪ್ರಕರಣ ನಮ್ಮ ಬ್ರ್ಯಾಂಡ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಡಾಫೆಯ ಪ್ರಯಿಕ್ರಿಯೆ ನೀಡಿದೆ ಎಂದು ಆರೋಪಿಸಿದ್ದಾರೆ.
ಜನರ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಕಂಪನಿ ನಿರ್ಲಕ್ಷ್ಯ ಮಾಡುತ್ತಿದೆ. ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿ ಜಾಹ್ನವಿಯವರಿಗೆ ಬೆಂಬಲಿಸಿದ್ದಾರೆ.
ಫ್ರೋಜನ್ ಬಾಟಲ್ ಕಂಪನಿ ಈ ಪ್ರಕರಣದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ನಾನು ಈ ಬ್ರ್ಯಾಂಡ್ ಬಳಕೆ ಕೈಬಿಡುತ್ತೇನೆ. ನನ್ನ ಪರಿಚಿತರಿಗೂ ಬಳಸದಂತೆ ಸಲಹೆ ನೀಡುತ್ತೇನೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ರೇಪ್ ಮಾಡಿ ಗರ್ಭಪಾತ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್ಮೇಲ್ – ಸಹ ಕಲಾವಿದೆಯ ದೂರಿನಲ್ಲಿ ಏನಿದೆ?