ಚೆನ್ನೈ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ.
ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಲಿವರ್ ಡ್ಯಾಮೇಜ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂದೆಗೆ ಮಗಳ ಲಿವರ್ ನ ಒಂದು ಭಾಗವನ್ನು ಕಸಿ ಮಾಡುವಲ್ಲಿ ಚೆನ್ನೈನ ಜಿಇಎಂ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಕೇವಲ ಪಿತ್ತಜನಕಾಂಗದ ಒಂದು ಭಾಗವನ್ನು ಮಾತ್ರ ಕಸಿ ಮಾಡಲಾಗಿದೆ.
Advertisement
Advertisement
ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಇಎಂ ಆಸ್ಪತ್ರೆಯ ವೈದ್ಯರು, ರೋಗಿಗೆ ಲಿವರ್ ನ ಒಂದು ಭಾಗ ಮಾತ್ರ ಡ್ಯಾಮೇಜ್ ಆಗಿ ಕೊನೆಯ ಹಂತ ತಲುಪಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಲಿವರ್ ಸಿಗುತ್ತಾ ಅಂತ ದಾನಿಗಳಿಗೆ ಕಾಯುತ್ತಿದ್ದೆವು. ಆದರೆ ದಾನಿಗಳು ಸಿಗದ ಕಾರಣ ಮಗಳು ಹತಾಶೆಗೊಂಡು ತಂದೆಯ ಸ್ಥಿತಿಯನ್ನು ನೋಡಿ ನಾನೇ ನನ್ನ ಅಂಗವನ್ನು ದಾನ ಮಾಡುತ್ತೇನೆ ಎಂದು ಮಗಳು ಮುಂದೆ ಬಂದಳು ಎಂದು ಹೇಳಿದ್ದಾರೆ.
Advertisement
ಮಗಳು ಈ ನಿರ್ಧಾರಕ್ಕೆ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಆಕೆ ಇನ್ನೂ ಮದುವೆಯಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡಿದರೆ ಹೊಟ್ಟೆ ಭಾಗದಲ್ಲಿ ಮಾರ್ಕ್ ಆಗುತ್ತದೆ. ಈ ರೀತಿ ಆದರೆ ಮುಂದೆ ಈಕೆಯನ್ನು ಯಾರು ವಿವಾಹ ಆಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ನಾವು ಆಕೆ ಕುಟುಂಬದವರಿಗೆ ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದ್ದೇವೆ. ಮತ್ತು ಆದರ ಕಾರ್ಯ ವಿಧಾನದ ಬಗ್ಗೆಯೂ ಅರ್ಥವಾಗುವಂತೆ ವಿವರಿಸಿ ಹೇಳಿದಾಗ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ಹೇಳಿದ್ದಾರೆ.
Advertisement
ಇದೇ ಮೊದಲ ಬಾರಿಗೆ ಭಾರತದಲ್ಲಿ ಡಾ. ಸಿ ಪಳನಿವೆಲು ಮತ್ತು ಅವರ ತಂಡವು ಲ್ಯಾಪರೊಸ್ಕೋಪಿಕ್ ಪಿತ್ತಜನಕಾಂಗದ ಕಸಿ ಮಾಡಿದೆ. ಲಿವರಿನ ಬಲ ಅರ್ಧವನ್ನು ಮೂರೂವರೆ ಗಂಟೆಗಳಲ್ಲಿ ಯಶಸ್ವಿಯಾಗಿ ಬೇರ್ಪಡಿಸಿ ನಂತರ ತಂದೆಗೆ ಮಗಳ ಪಿತ್ತಜನಕಾಂಗದ ಅರ್ಧ ಭಾಗವನ್ನು ಜೋಡಣೆ ಮಾಡಲಾಗಿದೆ ಎಂದು ವೈದ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೈದ್ಯರ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಈ ಕೆಲಸದ ಬಗ್ಗೆ ವಿವರಿಸಿದ್ದಾರೆ. ವೈದ್ಯರ ಈ ಸಾಧನೆಯನ್ನು ಮೆಚ್ಚಿರುವ ಪಳನಿಸ್ವಾಮಿ ಅವರು ವೈದ್ಯರ ಜೊತೆ ತಂದೆಗೆ ಅಂಗವನ್ನು ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.