ಬೆಂಗಳೂರು: ಕುಮದ್ವತಿ ನದಿಯ ಕಾಲುವೆಗೆ ಕಾರ್ಖಾನೆಗಳ ರಾಸಾಯನಿಕ ವಸ್ತು, ಪ್ಲಾಸ್ಟಿಕ್ ಸೇರಿಕೊಂಡಿದೆ. ಈ ನೀರನ್ನು ಕುಡಿದು ಹಸು, ಕರುಗಳು ಸಾವನ್ನಪ್ಪುತ್ತಿವೆ ಎಂದು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಲ್ಕೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿ ನೀರಿನ ಮೂಲಕ್ಕೆ ಬೆಂಗಳೂರಿನ ವಿಜಯನಗರ ಮೂಲದ ಕಂಪನಿ ಜೆ.ಎಸ್.ಡಬ್ಲ್ಯು ನಿಂದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಹಾಕಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ತ್ಯಾಜ್ಯದಿಂದ ನೀರಿನ ಮೂಲ ಸಂಪೂರ್ಣ ಕಲುಷಿತವಾಗಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಈಗಾಗಲೇ ಈ ನೀರನ್ನು ಕುಡಿದ ಹಸು ಮತ್ತು ಕರುಗಳು ಸಾವುನ್ನಪ್ಪಿದ್ದು, ಕುಮದ್ವತಿ ಕಾಲುವೆ ಪಕ್ಕದ ಕೊಳವೆ ಬಾವಿಯ ನೀರು ಕೂಡ ಕಲುಷಿತವಾಗಿದೆ. ಅದನ್ನು ಸೇವಿಸುವ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಬರುವ ಮುನ್ನ ಸ್ಥಳೀಯ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.
Advertisement
Advertisement
ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜೆ.ಎಸ್.ಡಬ್ಲ್ಯು ಕಂಪನಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಕುಮದ್ವತಿ ನದಿಯಿಂದ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯುತ್ತದೆ. ಈ ಹಿಂದೆ ಹಲವಾರು ಸ್ವಯಂ ಸೇವಕ ಸಂಸ್ಥೆಗಳು ಈ ನದಿ ಪಾತ್ರವನ್ನು ಶುದ್ಧಗೊಳಿಸಿದ್ದರು. ಇದೀಗ ಮತ್ತೆ ನದಿ ಕಲುಷಿತವಾಗುತ್ತಿರುವುದು ಬೇಸರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.