Connect with us

Belgaum

ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

Published

on

ಚಿಕ್ಕೋಡಿ(ಬೆಳಗಾವಿ): ಬಟಾಣಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಪಲಾವ್, ಪಲ್ಯ, ಫ್ರೈಡ್ ರೈಸ್ ಹೀಗೆ ನಾನಾ ವಿಧದ ಅಡುಗೆಗೆ ಬಳಸುತ್ತೇವೆ. ಆದರೆ ಅದೇ ಬಟಾಣಿ ಇದೀಗ ಕೆಮಿಕಲ್‍ಮಯವಾಗಿ ಪರಿವರ್ತನೆಯಾಗಿದ್ದು, ಆರೋಗ್ಯಕ್ಕೆ ಕುತ್ತು ತರುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಪ್ರತಿನಿತ್ಯ ಇಂಥ ವಿಷಪೂರಿತ ತರಕಾರಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಬೆರಕೆ ದಂಧೆ ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಗ್ರಾಮೀಣ ಜನರಿಗೂ ಈಗ ಮೋಸದ ದಂಧೆ ಕಾಡಲು ಆರಂಭಿಸಿದೆ. ಹಸಿ ತರಕಾರಿ ಕಾಳುಗಳು ಹಚ್ಚ ಹಸಿರಾಗಿ, ಅಂದವಾಗಿ ಕಾಣಲು ಕೆಮಿಕಲ್ ಬಣ್ಣ ಬಳಿದು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಬಟಾಣಿ ಪ್ರಮುಖ. ಇಂತಹ ದಂಧೆಯನ್ನು ‘ಪಬ್ಲಿಕ್ ಟಿವಿ’ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

ಹಚ್ಚ ಹಸಿರಾಗಿ ಕಾಣುವ ಬಟಾಣಿ ಕಾಳುಗಳು ನೈಸರ್ಗಿಕವಲ್ಲ. ಇದಕ್ಕೆ ಕೆಮಿಕಲ್ ಮಿಶ್ರಿತ ಬಣ್ಣವನ್ನ ಬಳಸಿ ಫುಲ್ ಕಲರ್‍ಫುಲ್ ಮಾಡುತ್ತಾರೆ. ಹಸಿರಾಗಿ ಕಾಣಲು ಹೀಗೆ ವಿಷಪೂರಿತ ಬಣ್ಣ ಬಳಿಯಲಾಗುತ್ತದೆ. ಕಲರ್ ನೋಡಿದ ಗ್ರಾಮೀಣ ಭಾಗದ ಜನತೆ ಮೋಸ ಹೋಗಿ ಕೊಂಡುಕೊಳ್ಳುತ್ತಿದ್ದು, ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಮಿಕಲ್ ಮಿಶ್ರಣ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾ ಸ್ಥಿತಿಯಲ್ಲಿದ್ದಾರೆ.

ಈ ದಂಧೆಕೋರರು ಪಟ್ಟಣ ಪ್ರದೇಶಗಳಿಗೆ ಆಗಮಿಸುವ ಗ್ರಾಮೀಣ ಜನರನ್ನು ಟಾರ್ಗೆಟ್ ಮಾಡಿಕೊಂಡು, ಪಟ್ಟಣಗಳ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಹೆಚ್ಚು ಗ್ರಾಮೀಣ ಪ್ರದೇಶದ ಜನ ಬರುತ್ತಾರೆ. ಬಣ್ಣಕ್ಕೆ ಮಾರು ಹೋಗಿ ಇಂತಹ ಕೆಮಿಕಲ್ ಮಿಶ್ರಿತ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ. ಹಳ್ಳಿ ಜನರಿಗೆ ಇದ್ಯಾವುದರ ಅರಿವಿಲ್ಲದೆ ಖರೀದಿ ಮಾಡುತ್ತಿದ್ದರೆ, ನಗರದ ವಿದ್ಯಾವಂತರು ಸಹ ಇಂತಹ ಕಲರ್‍ಫುಲ್ ಬಟಾಣಿಗಳಿಗೆ ಮಾರು ಹೋಗುತ್ತಿದ್ದಾರೆ.

ಮೊದಲು ಬೆಂಗಳೂರು ಸೇರಿದಂತೆ ಮಹಾ ನಗರಗಳ ಜನರನ್ನು ಟಾರ್ಗೆಟ್ ಮಾಡಿ ಈ ದಂಧೆ ನಡೆಯುತ್ತಿತ್ತು. ಆದರೆ ಇದೀಗ ಗ್ರಾಮೀಣ ಭಾಗಕ್ಕೂ ಈ ದಂಧೆ ಒಕ್ಕರಿಸಿದ್ದು, ತಾಜಾ ತರಕಾರಿ ಸೇವಿಸುತ್ತಿದ್ದ ಗ್ರಾಮೀಣ ಜನ ಕೂಡ ಈಗ ವಿಷಪೂರಿತ ತರಕಾರಿ ಸೇವನೆ ಮಾಡುವಂತಾಗಿದೆ.

ಇಂತಹ ವಿಷಪೂರಿತ ಬಣ್ಣದ ಸೇವನೆಯಿಂದ ಕ್ಯಾನ್ಸರ್ ನಂತ ಮಾರಕ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದರೂ ಈ ದಂಧೆ ರಾಜರೋಷವಾಗಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ದಂಧೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಟಾಣಿಗೆ ಬಳಸುವ ಕೆಮಿಕಲ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ನಮ್ಮ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಜನ ಸಹ ಈ ಕುರಿತು ಜಾಗೃತವಾಗಬೇಕು. ಇಲಾಖೆಯಿಂದ ಸಹ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in