ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆನ್ನಲ್ಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರೊಂದಿಗೆ ಡಿನ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಇಂದು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಸುಮಲತಾ ಅವರ ಭೇಟಿಯ ಕುರಿತು ದಿನೇಶ್ ಗುಂಡೂರಾವ್ ಅವರಿಗೆ ವಿವರಣೆ ನೀಡಿ ಸ್ಪಷ್ಟನೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದು ಚಲುವರಾಯ ಸ್ವಾಮಿ ಅವರಿಗೆ ತುರ್ತು ಬುಲಾವ್ ನೀಡಿದ್ದರು. ಇದರಂತೆ ಚಲುವರಾಯ ಸ್ವಾಮಿ ಅವರು ಕಚೇರಿಗೆ ಆಗಮಿಸಿದ್ದರು. ಈ ವೇಳೆ ಸಚಿವ ಜಮೀರ್ ಅಹಮ್ಮದ್ ಅವರು ಹಾಜರಿದ್ದರು.
Advertisement
Advertisement
ಚಲುವರಾಯಸ್ವಾಮಿ ಸಮರ್ಥನೆ: ಈ ವೇಳೆ ಸುಮಲತಾ ಅವರ ಭೇಟಿಯ ಬಗ್ಗೆ ದಿನೇಶ್ ಗುಂಡೂರಾವ್ ಅವರು ವಿವರಣೆ ಪಡೆದಿದ್ದಾರೆ. ಸುಮಲತಾ ಜೊತೆ ಅವರ ಭೇಟಿ ಯಾಕೆ? ಸಭೆಗೆ ಹೋಗಿದ್ದ ಕಾರಣವೇನು? ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆದಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ. ದಿನೇಶ್ ಗುಂಡೂರಾವ್ ಅವರ ಪ್ರಶ್ನೆಗಳಿಗೆ ಉತ್ತರಿಸಿರುವ ಚಲುವರಾಯ ಸ್ವಾಮಿ ಅವರು, ಚುನಾವಣೆ ಬಳಿಕ ನಾವು ಸುಮಲತಾ ಅವರನ್ನ ಭೇಟಿ ಮಾಡಿದ್ದರಲ್ಲಿ ತಪ್ಪು ಏನಿದೆ? ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆ ಹೇಗೆ ಆಗುತ್ತೆ? ಅಂದು ಇಂಡವಾಳು ಸಚ್ಚಿದಾನಂದ ಅವರ ಹುಟ್ಟುಹಬ್ಬ ಇತ್ತು. ಈ ಕಾರಣದಿಂದ ಸಭೆಗೆ ಹಾಜರಾಗಿದ್ದು, ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಚುನಾವಣೆಯ ಆರಂಭದಿಂದಲೂ ನಾವು ಜೆಡಿಎಸ್‍ನಿಂದ ದೂರವೇ ಉಳಿದಿದ್ದೇವೆ. ಈ ಬಗ್ಗೆ ನಿಮ್ಮ ಗಮನಕ್ಕೂ ಮೊದಲೇ ತಂದಿದ್ದೇವೆ. ಏನು ಸಮಸ್ಯೆ ಆಗಿತ್ತು ಎನ್ನುವುದನ್ನು ತಿಳಿಸಿದ್ದೇವೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಸುಮಲತಾ ಪರ ನಾವು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
Advertisement
ಈ ವೇಳೆ ಸಿಎಂ ಹೈಕಮಾಂಡ್‍ಗೆ ದೂರು ನೀಡಿರುವ ಬಗ್ಗೆ ದಿನೇಶ್ ಗುಂಡೂರಾವ್ ಪ್ರಸ್ತಾಪ ಮಾಡಿದ್ದು, ಇದಕ್ಕೂ ಉತ್ತರಿಸಿದ ಚಲುವರಾಯಸ್ವಾಮಿ ಅವರು, ಮಂಡ್ಯದಲ್ಲಿ ಕುಮಾರಸ್ವಾಮಿ ಏನಾದ್ರು ಕಾಂಗ್ರೆಸ್ ಪಕ್ಷವನ್ನ ಬೆಳೆಸ್ತಾರಾ? ನಾವೇ ತಾನೇ ಪಕ್ಷದ ಕಾರ್ಯಕರ್ತರಿಗೆ ಉತ್ತರ ಕೊಡಬೇಕು. ಅದಕ್ಕೆ ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಿದ್ದೆವು ಅಷ್ಟೇ ಎಂದು ತಿಳಿಸಿದ್ದಾರೆ.
Advertisement
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ಅವರು, ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ವಿಡಿಯೋ ಬಗ್ಗೆ ವಿವರಣೆ ನೀಡಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷವದ್ದರಿಂದ ಮುಂದೇ ಏನು ಮಾಡಬೇಕು ಎಂದು ನಾಯಕರು ತೀರ್ಮಾನ ಮಾಡುತ್ತಾರೆ. ಆದರೆ ವಿಡಿಯೋ ಈಗ ಏಕೆ ಬಿಡುಗಡೆ ಆಗಿದೆ ಎನ್ನುವುದು ತಿಳಿದಿಲ್ಲ. ಪೊಲೀಸರಿಗೆ ಯಾರು ಒತ್ತಡ ಹಾಕಿದ್ದರೋ, ಪೊಲೀಸರು ಹೋಟೆಲ್ ಅವರ ಮೇಲೆ ಏನು ಒತ್ತಡ ಹಾಕಿದ್ದರೋ? ಚುನಾವಣೆ ಮುನ್ನ ವಿಡಿಯೋ ಬಿಡುಗಡೆ ಆಗಿದ್ದರೆ ಹೆಚ್ಚಿನ ಪ್ರಭಾವ ಉಂಟಾಗುತಿತ್ತು. ಇದರೆ ಪ್ರಭಾವ ಏನು ಇಲ್ಲ ಎಂದು ಹೇಳಿದರು.
ಇದೇ ವೇಳೆ ಶಾಸಕ ಸುರೇಶ್ ಗೌಡ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು 25 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಯಾರ ವಿರುದ್ಧವೂ ಕ್ಷುಲ್ಲಕವಾಗಿ ಮಾತನಾಡಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ ನಾನು ಎಂದೂ ಆ ರೀತಿ ಒಬ್ಬರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಲ್ಲ. ಅವರು ಮಾತನಾಡಿಕೊಳ್ಳಲಿ ಬಿಡಿ. ನಾವು ಸುಮಲತಾ ಪರ ಕೆಲಸ ಮಾಡಿಲ್ಲ, ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನವಹಿಸಿದ್ದೇವೆ ಬಿಟ್ಟರೆ ನಾವು ಎಲ್ಲೂ ಅಪಪ್ರಚಾರ ಮಾಡಿಲ್ಲ ಎಂದರು.