ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಅಂದರೆ ಮೈಸೂರು ರಾಜರಿಗೆ ವಿಶೇಷವಾದ ಭಕ್ತಿ, ನಂಬಿಕೆ ಇದೆ. ಚೆಲುವನಾರಾಯಣ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಕೆಲವು ವಿಶೇಷ ಸಂದರ್ಭಗಳಲ್ಲಿ ಚೆಲುವನಾರಾಯಣ ಸ್ವಾಮಿಗೆ ಮೈಸೂರು ಮಹಾರಾಜರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ವಿಜಯದಶಮಿಯ ದಿನ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಗೆ ರಾಜರ ವೇಷ ಧರಿಸಿ ಮೆರವಣಿಗೆ ಮಾಡುವಾಗ ಅಪಶಕುನ ಜರುಗಿ ಹೋಗಿದೆ.
ಶುಕ್ರವಾರ ವಿಜಯದಶಮಿ ಆದ್ದರಿಂದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅಶ್ವವಾಹನೋತ್ಸವ ಸಂಭ್ರಮದಿಂದ ಜರುಗುತ್ತಿತ್ತು. ಮಹಾರಾಜರ ಅಲಂಕಾರದಲ್ಲಿದ್ದ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ಬನ್ನಿ ಮಂಟಪದವರೆಗೂ ಹೊತ್ತುಕೊಂಡು ಬರಲಾಯಿತು. ಆ ನಂತರ ಬನ್ನಿ ಪೂಜೆ ನೆರವೇರಿಸಿ ದೇವಾಲಯಕ್ಕೆ ಮರಳಿ ಬರಲಾಗುತ್ತಿತ್ತು. ಈ ವೇಳೆ ರಾಜ ಬೀದಿಯಲ್ಲಿ ಇದ್ದಕ್ಕಿದ್ದಂತೆ ಅಪಶಕುನ ನಡೆದು ಹೋಯಿತು. ಭಕ್ತಾದಿಗಳು ನೋಡು ನೋಡುತ್ತಿದ್ದಂತೆ, ಅಶ್ವಾರೋಹಿಯಾಗಿದ್ದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಮರದ ಬೊಂಬು ಮುರಿದು ಹೋಯಿತು. ಇನ್ನೇನು ದೇವರ ವಿಗ್ರಹ ನೆಲಕ್ಕೆ ಬಿತ್ತು ಎನ್ನುವಷ್ಟರಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ಚೆಲುವನಾರಾಯಣ ಸ್ವಾಮಿ ವಿಗ್ರಹ ನೆಲಕ್ಕೆ ಬೀಳದಂತೆ ಹಿಡಿದುಕೊಂಡರು.
ಈ ಘಟನೆ ನಡೆಯುತ್ತಿದ್ದಂತೆಯೇ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಭಕ್ತರು ಇದೇನು ಅಪಶಕುನದ ಮುನ್ಸೂಚನೆಯಾ ಎಂದು ಮಾತನಾಡಲು ಆರಂಭಿಸಿದ್ದಾರೆ. ಹಿಂದೆಲ್ಲ ಮೈಸೂರು ಮಹಾರಾಜರೇ ಮುಂದೆ ನಿಂತು ಚೆಲುವನಾರಾಯಣ ಸ್ವಾಮಿಯ ಅಶ್ವವಾಹನೋತ್ಸವ ನಡೆಸುತ್ತಿದ್ದರು. ಇತಿಹಾಸದಲ್ಲಿ ಒಮ್ಮೆಯೂ ಕೂಡ ಉತ್ಸವದ ವೇಳೆ ಈ ರೀತಿ ಅವಘಡ ಸಂಭವಿಸಿರಲಿಲ್ಲ. ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಇರುವಾಗಲೇ ಇದೇ ಮೊದಲ ಬಾರಿಗೆ ಈ ರೀತಿ ಅವಘಡ ಸಂಭವಿಸಿದೆ. ಈ ರೀತಿಯ ಘಟನೆಗಳನ್ನು ಶಕುನ ಅಪಶಕುನದ ರೀತಿ ನೋಡುತ್ತೇವೆ. ಇದು ಊರಿಗೆ ದೇವರಿಗೆ ಆಗುವ ಅಪಚಾರದ ಮುನ್ಸೂಚನೆ ಇರಬಹುದು. ಮಹಾರಾಜರಿಗೆ ಸಂಕಟ ಆಗುವ ಸಮಸ್ಯೆಗಳು ಹೆಚ್ಚಾಗುವ ಮುನ್ಸೂಚನೆಯೂ ಇರಬಹುದು ಎಂದು ಮೇಲುಕೋಟೆ ಸ್ಥಾನಾಚಾರ್ಯರಾದ ಶ್ರೀನಿವಾಸನ್ ನರಸಿಂಹನ್ ಗುರೂಜಿ ಹೇಳುತ್ತಾರೆ.
ಉತ್ಸವ ನಡೆಯುವಾಗ ಅಶ್ವಾರೋಹಿಯಾದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಬೊಂಬು ಮುರಿಯಲು ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಉತ್ಸವ ಮೂರ್ತಿ ಹೊರುವ ಬೊಂಬು ಗಟ್ಟಿಯಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧವೂ ಅಸಮಾಧಾನ ಕೇಳಿ ಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv