ಬೆಂಗಳೂರು: ಜನ ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಸ್ವಲ್ಪವಾದರೂ ಕೂಡಿಡಬೇಕೆಂದು ಚೀಟಿ ಹಾಕುತ್ತಾರೆ. ಕಷ್ಟವಾದರೂ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಹಣ ಕಟ್ಟುತ್ತಾರೆ. ಹೀಗೆ 100ಕ್ಕೂ ಹೆಚ್ಚು ಜನರ ಬಳಿ ಹಣ ಕಟ್ಟಿಸಿಕೊಂಡು ಮಹಿಳೆ ಪರಾರಿಯಾಗಿದ್ದಾಳೆ.
ಬೆಂಗಳೂರು ಗ್ರಾಮಂತರ ಜಿಲ್ಲೆಯ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದಲ್ಲಿ ಘಟನೆ ನಡೆದಿದ್ದು, ಕಳೆದ ಐದಾರು ವರ್ಷಗಳಿಂದ ಬಸವನಪುರದಲ್ಲಿ ನೆಲೆಸಿದ್ದ ಮಂಜುಳಾ, ಚೀಟಿ ವ್ಯವಹಾರ ನಡೆಸುತ್ತಿದ್ದಳು. ಆಕೆಯನ್ನು ನಂಬಿ ಜನ ಲಕ್ಷಾಂತರ ಮೌಲ್ಯದ ಚೀಟಿಗಳನ್ನು ಹಾಕಿದ್ದರು.
ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ 8 ಕೋಟಿ ರೂ.ಗೂ ಅಧಿಕ ಹಣವನ್ನು ಕಟ್ಟಿಸಿಕೊಂಡಿದ್ದ ಮಂಜುಳಾ, ಗ್ರಾಮಸ್ಥರಿಗೆ ಪಂಗನಾಮ ಹಾಕಿ ಊರನ್ನೇ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾಳೆ. ಇತ್ತ ಕಷ್ಟ ಕಾಲಕ್ಕೆ ಇರಲೆಂದು ಚೀಟಿ ಹಾಕಿದ್ದ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಕಣ್ಣೀರು ಹಾಕುತ್ತಿದ್ದಾರೆ.
ಮೊದಲು ಚೀಟಿ ಹಣವನ್ನು ಕಾಲ ಕಾಲಕ್ಕೆ ನೀಡುತ್ತ ಬಂದ ಮಂಜುಳಾ, ಜನರ ಬಳಿ ವಿಶ್ವಾಸದಿಂದ ನಡೆದುಕೊಂಡಿದ್ದಳು. ಬಳಿಕ ಕೋಟಿ ಕೋಟಿ ರೂಪಾಯಿ ಮೌಲ್ಯದ ಚೀಟಿಗಳನ್ನು ನಡೆಸಲು ಶುರು ಮಾಡಿದ್ದು, ತಿಂಗಳಿಗೆ ಲಕ್ಷಾಂತರ ರೂ. ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಳು. ಆದರೆ ಕಳೆದ ಒಂದು ವಾರದ ಹಿಂದೆ ಏಕಾಏಕಿ ಮನೆ ಖಾಲಿ ಮಾಡಿರುವ ಮಂಜುಳಾ ಗ್ರಾಮಸ್ಥರ ಬಳಿ ಕಟ್ಟಿಸಿಕೊಂಡಿದ್ದ ಸುಮಾರು 8 ಕೋಟಿ ರೂ.ಗೂ ಅಧಿಕ ಮೌಲ್ಯದ ಚೀಟಿ ಹಣವನ್ನು ತೆಗೆದುಕೊಂಡು ರಾತ್ರೋರಾತ್ರಿ ಊರನ್ನೇ ಖಾಲಿ ಮಾಡಿ ಪರಾರಿಯಾಗಿದ್ದಾಳೆ.
ಚೀಟಿ ಹಾಕಿದವರಲ್ಲಿ ಅತೀ ಹೆಚ್ಚು ಗಾರ್ಮೆಂಟ್ಸ್ ನೌಕರರು, ಆಟೋ ಡ್ರೈವರ್, ದಿನಗೂಲಿ ನೌಕರರೇ ಇದ್ದು, ಹಣ ಕಳೆದುಕೊಂಡ ಜನ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಖತರ್ನಾಕ್ ಮಂಜುಳಾ ಬಳಿಕ ಚೀಟಿ ವ್ಯವಹಾರ ಆರಂಭಿಸಿದ್ದಳು. ಗಾರ್ಮೆಂಟ್ಸ್ ನಲ್ಲಿ ಪರಿಚಯವಿದ್ದ ಮಹಿಳೆಯರನ್ನು ಮೊದಲು ಟಾರ್ಗೆಟ್ ಮಾಡಿಕೊಂಡ ಈಕೆ, ಅವರ ಬಳಿ ಚೀಟಿ ಹಾಕಿಸಿಕೊಂಡಿದ್ದಳು. ಇದೇ ಚೀಟಿ ವ್ಯವಹಾರದ ಮೂಲಕವೇ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಿ, ಭವ್ಯವಾದ ಸ್ವಂತ ಮನೆಯನ್ನು ಸಹ ಖರೀದಿ ಮಾಡಿದ್ದಳು. ಬಣ್ಣದ ಮಾತಿನಿಂದ ಜನರಿಗೆ ಮಂಕು ಬೂದಿ ಎರಚಿದ್ದಳು. ಇದೀಗ ತನ್ನ ಸ್ವಂತ ಮನೆಯನ್ನೂ ಮಾರಿಕೊಂಡು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಹುಳಿಮಾವು ಪೊಲೀಸ್ ಠಾಣೆ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.