– ಒಂದೇ ತಿಂಗಳಿನಲ್ಲಿ ಚಿರತೆ ದಾಳಿ ಇಬ್ಬರು ಮಕ್ಕಳು ಬಲಿ
ಬಳ್ಳಾರಿ: ಗಣಿನಾಡಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಪೋಷಕರ ಜೊತೆ ಜಮೀನಿಗೆ ತೆರಳಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಜಯಸುಧಾ(13) ಬಾಲಕಿ ಮೃತ ದುರ್ದೈವಿ. ಶಾಲೆಗೆ ಕಿಸ್ಮಸ್ ಹಬ್ಬದ ರಜೆಯಿದ್ದ ಕಾರಣ ಜಮೀನಿಗೆ ಪೋಷಕರ ಜೊತೆ ಹೋಗುತ್ತಿದ್ದ ಜಯಸುಧಾ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ಹೊತ್ತೊಯ್ದಿದೆ. ಚಿರತೆ ದಾಳಿ ನಡೆಯುತ್ತಿದ್ದಂತೆ ಪೋಷಕರ ಚೀರಾಟ ಕೇಳಿ ಬಾಲಕಿಯನ್ನು ತುಸು ದೂರದಲ್ಲೇ ಬಿಟ್ಟು ಹೋಗಿದೆ. ತಕ್ಷಣ ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜಯಸುಧಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಕಳೆದ 15 ದಿನಗಳ ಹಿಂದೆ ದೇವಲಾಪುರ ಗ್ರಾಮದ ಪಕ್ಕದಲ್ಲೇ ಇರುವ ಸೋಮಲಾಪುರ ಗ್ರಾಮದಲ್ಲೂ ಚಿರತೆ ದಾಳಿ ಮಾಡಿ ಮೂರು ವರ್ಷದ ಬಾಲಕನನ್ನು ಬಲಿ ಪಡೆದಿತ್ತು. ಸೋಮಲಾಪುರದ ದಾಳಿ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯೊಂದನ್ನು ಸೆರೆ ಹಿಡಿದಿದ್ದರು. ಆದರೂ ಇದೀಗ ಮತ್ತೆ ಚಿರತೆ ದಾಳಿ ಮುಂದುವರಿದ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ಡಿಎಫ್‍ಓ ರಮೇಶ್ ಕುಮಾರ್, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ರೈತರು ಗ್ರಾಮಸ್ಥರು ಒಬ್ಬೊಬ್ಬರೆ ಜಮೀನಿಗೆ ತೆರಳದಂತೆ ಸೂಚನೆ ನೀಡಿದ್ದೇವೆ. ಅಲ್ಲದೇ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv