ಹಾವೇರಿ: ಕಾಡುಪ್ರಾಣಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದ್ದು, ಮಾಂಸದಲ್ಲಿ ಸ್ಫೋಟಕ ಬೆರೆಸಿಟ್ಟು ಸಂಶಯಾಸ್ಪದ ರೀತಿಯಲ್ಲಿ ಚಿರತೆಯನ್ನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ನಡೆದಿದೆ.
ಶನಿವಾರ ತಡರಾತ್ರಿ ಮೋಟೆಬೆನ್ನೂರು ಛತ್ರ ಗ್ರಾಮದ ನಡುವಿನ ಗುಡ್ಡದ ಬಳಿ ಸಂಶಯಾಸ್ಪದ ರೀತಿಯಲ್ಲಿ ಚಿರತೆ ಸಾವನ್ನಪ್ಪಿದೆ. ಇದು ಎರಡು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಆದರೆ ಚಿರತೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಒಂದೂವರೆ ತಿಂಗಳ ಹಿಂದೆ ಹಲ್ಲು, ಉಗುರಿನ ಆಸೆಗೆ ಚಿರತೆಯನ್ನು ಹತ್ಯೆ ಮಾಡಲಾಗಿತ್ತು. ಈಗ ಮಾಂಸದಲ್ಲಿ ಸ್ಫೋಟಕ ಬೆರೆಸಿಟ್ಟು ಚಿರತೆಯನ್ನ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಬ್ಯಾಡಗಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.