ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಹಿಡಿಯಲು ಹೋಗಿ ದನದ ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಘಟನೆ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವದ ವೇಳೆಗೆ ಆಹಾರ ಹುಡುಕಿ ಬಂದ ಚಿರತೆ ನಾಯಿಯನ್ನು ತಿನ್ನಲು ಮುಂದಾಗಿದೆ. ಈ ವೇಳೆ ನಾಯಿ ತಪ್ಪಿಸಿಕೊಂಡು ಸಂಗಬಸವನದೊಡ್ಡಿ ಗ್ರಾಮದ ರವಿ ಎಂಬವರಿಗೆ ಸೇರಿದ ಮನೆಯ ದನದ ಕೊಟ್ಟಿಗೆಗೆ ನುಗ್ಗಿದೆ. ಚಿರತೆ ಸಹ ನಾಯಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ಚಿರತೆ ದನದ ಕೊಟ್ಟಿಗೆಗೆ ಹೋಗಿದ್ದನ್ನು ಮನೆಯ ಮಾಲೀಕ ರವಿ ಹೊರಬಂದು ನೋಡಿದ್ದಾರೆ. ತಕ್ಷಣವೇ ದನದ ಕೊಟ್ಟಿಗೆಯ ಬಾಗಿಲನ್ನು ಹಾಕಿ ಹೊರಹೋಗದಂತೆ ಮಾಡಿದ್ದಾರೆ.
Advertisement
Advertisement
ಬಳಿಕ ಮನೆ ಮಾಲೀಕ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ರಾಮನಗರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಟ್ಟಿಗೆಯಲ್ಲಿ ಬಂಧಿಯಾಗಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಚಿರತೆಯನ್ನ ಕಂಡು ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಚಿರತೆ ಸೆರೆಯ ಬಳಿಕ ನಿರಾಳರಾಗಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿರುವ ಚಿರತೆಯನ್ನು ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ಬಿಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
Advertisement
ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.