ಉಡುಪಿ: ಆಹಾರ ಅರಸುತ್ತಾ ಕಾಡಿಂದ ನಾಡಿಗೆ ಬಂದ ಚಿರತೆ ಕತ್ತಲಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮಂದಾರ್ತಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಕತ್ತಲಿನಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಇಂದು ಬೆಳಗ್ಗೆ ಸ್ಥಳೀಯರು ನೋಡಿದ್ದಾರೆ. ಬೆಳಗ್ಗಿನ ಜಾವದವರೆಗೆ ಪ್ರಾಣ ಉಳಿಸಿಕೊಳ್ಳಲು ಈಜಾಡಿದ ಚಿರತೆ ಬಳಿಕ ಸಾವನ್ನಪ್ಪಿದೆ.
ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಚಿರತೆಯನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಸಂದರ್ಭದಲ್ಲಿ ಚಿರತೆ ಸಾವನ್ನಪ್ಪಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಅಧಿಕಾರಿಗಳು ಶವವನ್ನು ಮೇಲಕ್ಕೆತ್ತಿದ್ದಾರೆ. ಬೇಗ ಕಾರ್ಯಾಚರಣೆ ನಡೆಸಿದ್ರೆ ಚಿರತೆಯನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಯುವಕ ಗಣೇಶ ಸಾಯ್ಬರಕಟ್ಟೆ ಮಾತನಾಡಿ, ಅರಣ್ಯಾಧಿಕಾರಿ ಗಳ ಬಳಿ ಸರಿಯಾದ ಸಲಕರಣೆಗಳು ಇಲ್ಲ. ಕೂಡಲೇ ಬಾವಿಗೆ ಏಣಿ ಇಳಿಸಿದ್ದರೆ ಚಿರತೆ ಅದನ್ನು ಹತ್ತಿ ಕುಳಿತುಕೊಂಡು ಪ್ರಾಣ ಉಳಿಸುತ್ತಿತ್ತು. ಕಾಡು ನಾಶವೇ ಇದಕ್ಕೆಲ್ಲ ಕಾರಣ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಶಂಕರನಾರಯಣ ಅರಣ್ಯ ಇಲಾಖಾ ಸಿಬ್ಬಂದಿ ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಸಹಾಯ ಮಾಡಿದ್ದರು.