ಪಾರ್ಟಿಗೆ ಮಾಡಿ ಚೀಸಿ ಪನೀರ್ ಸಿಗರ್ ರೋಲ್ !

Public TV
2 Min Read
cheesy paneer cigar roll 2

ಸ್ನೇಹಿತರು ಮನೆಗೆ ಬಂದ ಸಂದರ್ಭ ಟೀ ಪಾರ್ಟಿ, ಕಿಟ್ಟಿ ಪಾರ್ಟಿ ಮಾಡುವುದು ಸಹಜ. ನೀವು ಸ್ನೇಹಿತರೊಂದಿಗೆ ಮನೆಯಲ್ಲಿಯೇ ಟೀ ಪಾರ್ಟಿ ಮಾಡುವುದಾದರೆ ಟೀ ಜೊತೆಗೆ ಬಿಸಿಬಿಸಿ ಏನಾದರೂ ಸ್ನಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಚೀಸಿ ಪನೀರ್ ಸಿಗರ್ ರೋಲ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಇದು ನಿಮ್ಮ ಪಾರ್ಟಿಗೆ ಪರ್ಫೆಕ್ಟ್ ಕಾಂಬಿನೇಷನ್ ಆಗಿದ್ದು, ನಿಮ್ಮ ಸ್ನೇಹಿತರು ಕೂಡಾ ಇದನ್ನು ಖಂಡಿತಾ ಇಷ್ಟಪಡುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಊಟದ ನಂತರ ಸವಿಯಲು ಮಾಡಿ ಸಿಹಿ ಸಿಹಿ ದೂದ್ ಪಾಕ್

Cheesy paneer cigar roll

ಬೇಕಾಗುವ ಸಾಮಗ್ರಿಗಳು:
ತುರಿದ ಪನೀರ್ – 1 ಕಪ್
ತುರಿದ ಚೀಸ್ – ಅರ್ಧ ಕಪ್
ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ ಕಪ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್
ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಜಜ್ಜಿದ ಬೆಳ್ಳುಳ್ಳಿ – 1 ಚಮಚ
ಪೆಪ್ಪರ್ ಪೌಡರ್ – 1 ಚಮಚ
ಗೋಧಿ ಹಿಟ್ಟು – 1 ಕಪ್

cheesy paneer cigar roll 1

ಮಾಡುವ ವಿಧಾನ:
* ಮೊದಲನೆಯದಾಗಿ, ಒಂದು ಬೌಲ್‌ನಲ್ಲಿ ಹಿಟ್ಟನ್ನು ತೆಗೆದುಕೊಂಡು ನೀರಿನ ಸಹಾಯದಿಂದ ಮೃದುವಾಗಿ ಕಲಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಬಳಿಕ ಅದನ್ನು ಅರ್ಧ ಘಂಟೆಯವರೆಗೆ ಬಿಡಿ.
* ಈಗ ಒಂದು ಬೌಲ್‌ನಲ್ಲಿ ಪನೀರ್, ಚೀಸ್, ಕ್ಯಾಪ್ಸಿಕಮ್, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಮತ್ತು ಪೆಪ್ಪರ್ ಪೌಡರ್ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಕಲಸಿ ಇಟ್ಟಿದ್ದ ಹಿಟ್ಟನ್ನು ತೆಗೆದುಕೊಂಡು ಮತ್ತೊಂದು ಬಾರಿ ಚೆನ್ನಾಗಿ ಕಲಸಿಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿ. ಬಳಿಕ ಅದನ್ನು ಸಣ್ಣ ಚಪಾತಿ ಅಥವಾ ರೋಟಿ ರೀತಿಯಲ್ಲಿ ಮಾಡಿಕೊಳ್ಳಿ.
* ಬಳಿಕ ಒಂದು ಚಪಾತಿಯ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಬಳಿಕ ಅದರ ಮೇಲೆ ಪನೀರ್ ಮಿಶ್ರಣವನ್ನು ಹಾಕಿಕೊಂಡು ಚಪಾತಿಯನ್ನು ತೆಳುವಾಗಿ ರೋಲ್ ಮಾಡಿಕೊಳ್ಳಿ. ಅದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
* ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿಕೊಂಡು ಅನ್ನು ಬಿಸಿಯಾಗಲು ಬಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ರೋಲ್‌ಗಳನ್ನು ಹಾಕಿಕೊಂಡು ಚನ್ನಾಗಿ ಬೇಯಿಸಿಕೊಳ್ಳಿ.
* ಎರಡೂ ಬದಿ ಚೆನ್ನಾಗಿ ಬೆಂದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕಾಯಿಸಿಕೊಳ್ಳಿ.
* ಬಿಸಿಬಿಸಿ ಚೀಸಿ ಪನೀರ್ ಸಿಗರ್ ರೋಲ್ ಸವಿಯಲು ಸಿದ್ಧ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ತಿನ್ನಲು ಕೊಡಿ. ಇದನ್ನೂ ಓದಿ: ಸ್ನ್ಯಾಕ್ಸ್‌ಗೆ ಬೆಸ್ಟ್ ಗ್ರೀನ್ ಟೊಮೆಟೋ ಫ್ರೈಸ್

Share This Article