ಒಂದು ವರ್ಷ ಎಷ್ಟು ಬೇಗ ಕಳೆದು ಹೋಯ್ತು ನೋಡು..! ಈ ಮಾತು ಒಂದಲ್ಲ ಒಂದು ರೀತಿ ಎಲ್ಲರೂ ಹೇಳುವಂತಹದ್ದೇ. ಯಾವುದೋ ಊರಿಂದ ಇನ್ನೊಂದು ಊರಿಗೆ ಬಂದು ದಿನಗಳು ಉರುಳಿದಾಗ, ಯಾವುದೋ ಒಂದು ಘಟನೆ ಘಟಿಸಿ ಕಾಲ ಜಾರಿ ಬಹಳ ಮೌನವಾಗಿ ಕುಳಿತಾಗ, ಎಲ್ಲೋ ದೊಡ್ಡ ಸದ್ದಲ್ಲಿ ಮಾತಾಡುವಾಗ ಹೌದಲ್ವಾ ಒಂದು ವರ್ಷ ಆಗೋಯ್ತು! ಎಂದು ನಕ್ಕು ಬಿಡುವುದು, ಇಲ್ಲವೇ ಕಣ್ಣಲ್ಲಿ ಒಂದು ಹನಿ ಗೊತ್ತಿಲ್ಲದ ಹಾಗೇ ಜಾರಿ ಬಿಡುವುದು ಇದ್ದದ್ದೇ.
ಯಾಕೇ ಗೊತ್ತಾ… ಈ ಸಮಯವೇ ಹಾಗೆ, ಒಂದಷ್ಟನ್ನು ಮರೆಸುತ್ತವೆ, ಒಂದಷ್ಟನ್ನು ನೆನಪಿಗೆ ತಂದಿಟ್ಟು ಕಣ್ಣಂಚಲ್ಲಿ ನೀರು ತಂದು ಮಜಾ ನೋಡುತ್ತವೆ. ಈಗ ನಮಗೂ ಅದೇ ಕಾಲ! ನಾವು ಏನಾದ್ರೂ ಸರಿ ನಗು-ನಗುತ್ತಾ ಇರುತ್ತೇವೆ ಎಂದು ಒಮ್ಮೆ ಆ ಕಣ್ಣ ಹನಿಗೆ ತಿರುಗಿಸಿ ಉತ್ತರ ಕೊಟ್ಟು 2025ಕ್ಕೆ ಹೆಜ್ಜೆ ಹಾಕೋಣ ಅಲ್ವಾ? ಯಾಕಾಂದರೆ ಅದೇ ನೆನಪುಗಳು, ಅದಕ್ಕೊಂದಷ್ಟು ರೆಕ್ಕೆ ಪುಕ್ಕ, ಬಾಲ! ಮತ್ತಷ್ಟು ಭಾರದ ಮನಸ್ಸು ಎಷ್ಟು ಅಂತ ಇವುಗಳ ಜೊತೆ ಕಾಲ ಕಳೆಯೋದು. ಇದೇ ರೀತಿಯ ರೆಕ್ಕೆ, ಪುಕ್ಕ, ಬಾಲ ಇದೆಲ್ಲ ಗಾಳಿಪಟಕ್ಕೂ ಇದೆ. ಹಕ್ಕಿಗಳಿಗೂ ಇದೆ. ಅವುಗಳು ನೆಮ್ಮದಿಯಾಗಿ ಹಾರಾಡುತ್ತಿವೆ. ಹೀಗಿದ್ದಾಗ ನಾವ್ಯಾಕೇ ಬಾನಿಗೆ ಜಿಗಿಯಬಾರದು? ಹೃದಯಕ್ಕೆ ಗಾಳಿಯ ದಾರ ಕಟ್ಟಿ ಯಾಕೆ ತೇಲಿಸಿ ಬಿಡಬಾರದು?
Advertisement
Advertisement
ಅಂದ ಹಾಗೇ ಒಂದಷ್ಟು ಗುರಿ ಎನ್ನುವ ಪಟ್ಟಿ ಇರತ್ತಲ್ಲ ಅದರ ಕಡೆನೂ ಗಮನ ಕೊಡ್ಬೇಕು ನೋಡಿ, ಕಳೆದ ವರ್ಷ ಅದೆಷ್ಟೋ ಗುರಿ ಹೊತ್ತು ಈಜುವಾಗ ಕೆಲವೊಂದಷ್ಟು ಮಧ್ಯದ್ಲಲೇ ಮುಳುಗಿ ಹೋಗಿವೆ, ಅಲ್ವಾ? ಹಾಗಂತ ಬಿಟ್ಟು ಬರುವುದು ಬೇಡ. ಮುಳುಗಿದ ಆಸೆಗಳ ಹುಡುಕಲು ಆಳ ಸಮುದ್ರಕ್ಕೆ ಇಳಿಯುವ ಯತ್ನ ಮಾಡಿದರೆ ಮುತ್ತುಗಳಿಗೇನು ಬರ? ಹುಡುಕಿ ಹೊರಟಿದ್ದಕ್ಕಿಂತಲೂ ಉತ್ತಮವಾದದ್ದು ಸಿಗಬಹುಲ್ವಾ?
Advertisement
ಮತ್ತೆ ಹೊಸ ಹೊಸ ಪಟ್ಟಿ ಬೆಳೆಸಿಕೊಳ್ಳುವುದಕ್ಕಿಂತ 2024ರಲ್ಲಿ ಕೈಗೂಡದ ಬಹು ಮುಖ್ಯವಾದ ಟಾರ್ಗೆಟ್‌ಗೆ ಗುರಿ ಇಡೋಣ. ಇದರಲ್ಲಿ ಯಾವುದೋ ಒಂದಷ್ಟು 2025ಕ್ಕೆ ಅವಧಿ ಮುಗಿದು ಹೋಗಿರುತ್ತದೆ ಅವುಗಳನ್ನು ಕೈ ಬಿಟ್ಟು ಹೊರಡೋಣ. ಇನ್ನೂ ಹೊಸದಾಗಿ ಒಂದೇ ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡ್ರೆ ಹೇಗೆ? ಯಾಕಂದ್ರೆ ಹೊಡೆಯೋದೆ ಹೊಡಿತೀವಂತೆ ದೊಡ್ಡದನ್ನೇ ಯಾಕ್ ಹೊಡಿಬಾರದು ಅಲ್ವಾ? ಅದರ ಪಕ್ಕದಲ್ಲಿ ಬೇರೆಯದೂ ಇರಲಿ, ಯಾಕಂದ್ರೆ ಗುರಿ ತಪ್ಪಿ ಅಕ್ಕಪಕ್ಕದ ಹಣ್ಣಿಗೆ ಬಿದ್ದಾಗಲೂ ನಾವು ಚಿಕ್ಕವರಿದ್ದಾಗ ಸಂಭ್ರಮಿಸಿದ್ವಿ ಅಲ್ವಾ?
Advertisement
ಅಂದ ಹಾಗೇ ನಾನು ಎಲ್ಲೇ ಹೋದ್ರು ಈ ಹಳೆಯ ನೋವು, ಕಹಿ ನೆನವುಗಳ ಬಗ್ಗೆ ಸುತ್ತಿ ಬಂದು ಬಿಡುತ್ತೇನೆ. ಯಾಕಂದ್ರೆ, ಒಂದು ಸಮಯದಲ್ಲಿ ಅವುಗಳ ವಿರುದ್ಧ ತೀವ್ರ ಹೋರಾಟ ಮಾಡಿದ್ದೇ! ಅದೇ ಕಾರಣಕ್ಕೆ ಆ ಬಗ್ಗೆ ಒಂದಷ್ಟು ಬರಿತೀನಿ. ಹೌದು ಅವೆಲ್ಲ ಹಳೆಯವು.. ಹೊಸದೇನಾದ್ರೂ ಇದ್ರೆ ಹೇಳು ಎಂದು ನಿಮ್ಮ ಮನಸ್ಸು ಹೃದಯಕ್ಕೆ ಒಮ್ಮೆ ಗದರಿ ಬಿಡಿ. ನಿಮ್ಮ ಮಾತನ್ನು ಅವುಗಳೇ ಕೇಳುವುದಿಲ್ಲ ಎಂದರೆ ಬೇರೆ ಯಾವುದನ್ನೂ ನಿಮಗೆ ನಿಯಂತ್ರಿಸಲು ಸಾಧ್ಯ?
ಕಹಿಯೂ ಔಷಧಿ!
ಎಲ್ಲಾ ಔಷಧಗಳೂ ಸಿಹಿಯಾಗಿ ಇರೋದಿಲ್ಲ, ಕೆಲವು ಮಾತ್ರೆ ಔಷಧಗಳು ಸ್ವಲ್ಪ ಕಹಿಯಾಗೇ ಇರ್ತವೆ. ಅಂದ ಹಾಗೇ ಎಲ್ಲಾ ನೆನಪುಗಳು ಸಿಹಿಯಾಗಿ ಇರೋದಿಲ್ಲ. ಅಂತಹ ನೆನಪುಗಳು, ಕಹಿ ಘಟನೆಗಳು ಔಷಧಿಯಂತೆ ಕೆಲಸ ಮಾಡುವ ಹಾಗೆ ಮನೆಮದ್ದು ತಯಾರಿಸಿಕೊಳ್ಳಿ..! 2025 ನಿಮ್ಮ ಹೃದಯ, ಮನಸ್ಸನ್ನು ಸದಾ ಗಾಳಿಪಟದಂತೆ ತೇಲಿಸಲಿ. ಹೊಸ ವರ್ಷದ ಶುಭಾಶಯಗಳು!