ಶಿವಮೊಗ್ಗ: ಸಿಬಿಐ (CBI) ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ 41 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ (Shivamogga) ಸಿಇಎನ್ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ (Uttar Pradesh) ಮೂಲದ ಮೊಹಮ್ಮದ್ ಅಹಮದ್ (45), ಅಭಿಷೇಕ್ ಕುಮಾರ್ (27) ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಗೋಪಾಳ ಬಡಾವಣೆ ನಿವಾಸಿ ಆನಂದ್ (72) ಎಂಬವರಿಗೆ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು, ನಿಮ್ಮ ಆಧಾರ್ ಕಾರ್ಡ್ ನಂಬರಿನಿಂದ ದೊಡ್ಡ ಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ ಎಂದು ಬೆದರಿಸಿದ್ದರು.
ನಿಮ್ಮನ್ನು ಅರೆಸ್ಟ್ ಮಾಡಬಾರದು ಎಂದರೆ ನಮ್ಮ ಬಳಿಯೇ ಸೆಟ್ಲ್‌ಮೆಂಟ್ ಮಾಡಿಕೊಳ್ಳಿ. ಇದಕ್ಕಾಗಿ 41 ಲಕ್ಷ ರೂ. ಹಣ ನೀಡುವಂತೆ ಹೇಳಿದ್ದರು. ನಕಲಿ ಸಿಬಿಐ ಅಧಿಕಾರಿಗಳ ಮಾತಿಗೆ ಹೆದರಿ ವ್ಯಕ್ತಿ ಹಣವನ್ನು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಅವರು ಮೋಸ ಹೋಗಿರುವುದು ತಿಳಿದಿದೆ. ಬಳಿಕ ಶಿವಮೊಗ್ಗದ ಸಿಇಎನ್ ಠಾಣೆಗೆ ತೆರಳಿ ದೂರು ನೀಡಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 23.89 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.