ಇಂದೋರ್: ನಗರದ 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಮದುವೆಯಾಗಿದ್ದ ಮಹಿಳೆ ಆರೇ ದಿನದಲ್ಲಿ ಮನೆಯಲ್ಲಿ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಬರೋಬ್ಬರಿ 45 ದಿನಗಳ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮಂದಸೌರ ನಿವಾಸಿ 60 ವರ್ಷದ ರೂಪ್ ದಾಸ್ ಮೋಸಕ್ಕೊಳಗಾದ ವ್ಯಕ್ತಿ. ಪೂಜಾ ಅಲಿಯಾಸ್ ಹೇಮಾ ಬಂಧಿತ ಆರೋಪಿ. ರೂಪ್ ದಾಸ್ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಿವೃತ್ತಿಯ ನಂತರ ರೂಪ್ ದಾಸ್ ಎರಡನೇ ಮದುವೆಯಾಗಲು ಇಚ್ಛಿಸಿದ್ದರು. ರೂಪ್ ದಾಸ್ ಮೊದಲ ಪತ್ನಿ 1992ರಲ್ಲಿ ನಿಧನ ಹೊಂದಿದ್ದು, ಮಕ್ಕಳನ್ನು ಸಹ ಹೊಂದಿಲ್ಲ. ನಿವೃತ್ತಿವರೆಗೂ ರೂಪ್ ದಾಸ್ ಏಕಾಂಗಿ ಜೀವನ ನಡೆಸಿಕೊಂಡು ಬಂದಿದ್ದರು. ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗೆ ಇರಬೇಕೆಂದು ಸ್ನೇಹಿತರು ಹಾಗು ಕುಟುಂಬಸ್ಥರ ಸಲಹೆಯ ಮೇರೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
Advertisement
ಆವತ್ತು ಪರಿಚಯವಾಗಿದ್ದೇ ಪೂಜಾ: 18 ನವೆಂಬರ್ 2017ರಂದು ಸ್ನೇಹಿತ ಅಶೋಕ್ ಕುಮಾರ್ ಗೆ ಬ್ರಾಹ್ಮಣ ಸಮುದಾಯದ 40 ರಿಂದ 50 ವಯಸ್ಸಿನ ವಿಧವೆಯನ್ನು ತೋರಿಸುವಂತೆ ಹೇಳಿದ್ದರು. ಕೆಲವು ದಿನಗಳ ಬಳಿಕ ಅಶೋಕ್ ಕುಮಾರ್ ಪೂಜಾ ಎಂಬ ಮಹಿಳೆಯನ್ನು ಪರಿಚಯ ಮಾಡಿಸಿದ್ದಾನೆ. ನನಗೆ ಮಹಿಳೆಯ ಕುಟುಂಬ ಮತ್ತು ಆಕೆಯ ಹಿನ್ನೆಲೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಚಿಂತೆ ಮಾಡುವ ಅಗತ್ಯವಿಲ್ಲ ಅಂತ ತಿಳಿಸಿದ್ದಾನೆ. ಪೂಜಾ ಜೊತೆಗೆ ಸಹೋದರ ಎಂದು ಹೇಳಿಕೊಂಡು ಜಿತೇಂದ್ರ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದನು.
Advertisement
Advertisement
ದೇವಸ್ಥಾನದಲ್ಲಿ ಮದುವೆ: 22 ನವೆಂಬರ್ 2017ರಂದು ಅಶೋಕ್ ಮತ್ತು ಜಿತೇಂದ್ರ ಸಮ್ಮುಖದಲ್ಲಿ ನಗರದ ಸಂತೋಷಿ ಮಾ ದೇವಸ್ಥಾನದಲ್ಲಿ ರೂಪ್ ದಾಸ್ ಮತ್ತು ಪೂಜಾ ಇಬ್ಬರ ಮದುವೆ ನಡೆದಿದೆ. ಮದುವೆ ಬಳಿಕ ರೂಪ್ ದಾಸ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತೆ ತಿಳಿಸಿ ತಿಜೋರಿಯ ಬೀಗದ ಕೈಯನ್ನು ನೀಡಿದ್ದಾರೆ.
Advertisement
ನವೆಂಬರ್ 29ರಂದು ರೂಪ್ ದಾಸ್ ಎರಡನೇ ಮಹಡಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಸಹಾಯಕ್ಕಾಗಿ ಪತ್ನಿ ಪೂಜಾಳನ್ನು ಕರೆದಿದ್ದಾರೆ. ರೂಪ್ ದಾಸ್ ಕೂಗಿದ್ದಕ್ಕೆ ಉತ್ತರ ನೀಡದೇ ಇರುವುದರಿಂದ ಕೆಳಗೆ ಬಂದು ನೋಡಿದ್ರೆ ತಿಜೋರಿಯ ಬಾಗಿಲು ತೆರೆದಿದ್ದು, ಗೃಹ ಪ್ರವೇಶಕ್ಕೆ ಅಂತ ಇರಿಸಿದ್ದ 3 ಲಕ್ಷ ರೂ. ಹಣ ಮತ್ತು ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ಪೂಜಾ ಎಸ್ಕೇಪ್ ಆಗಿದ್ದಾಳೆ.
ಮನೆಯಿಂದ ಪೂಜಾ ನಾಪತ್ತೆಯಾಗಿದ್ದನ್ನು ಕಂಡ ರೂಪ್ ದಾಸ್ ಕೂಡಲೇ ಮದುವೆ ಮಾಡಿಸಿದ್ದ ಅಶೋಕ್‍ಕುಮಾರ್ ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ನನ್ನ ಹಣ ಮತ್ತು ಆಭರಣಗಳನ್ನು ಹಿಂದುರುಗಿಸಿ ಕೊಡುವಂತೆ ಹೇಳಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಕ್ಕಿದ್ದು ಹೀಗೆ: ಪೊಲೀಸರು ಅಶೋಕ್ ಕುಮಾರ್‍ನನ್ನು ಕರೆದು ವಿಚಾರಣೆ ನಡೆಸಿದಾಗ ಕಾಣೆಯಾಗಿರುವ ಪೂಜಾಳ ವಿಳಾಸ ಗೊತ್ತಿಲ್ಲ. ಕೇವಲ ಫೋನ್ ನಂಬರ್ ನಿಂದಲೇ ಸಂಪರ್ಕಿಸಿ ಇಬ್ಬರ ಮದುವೆ ಮಾಡಿಸಲಾಗಿತ್ತು ಅಂತ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಆಶೋಕ್‍ಕುಮಾರ್ ಪತ್ನಿಯಿಂದ ಪೂಜಾಳ ನಂಬರ್ ಗೆ ಕರೆ ಮಾಡಿಸಿ, ತನ್ನ ಪತಿಗೆ ಆರೋಗ್ಯ ಸರಿಯಿಲ್ಲ, ಬಂದು ಭೇಟಿಯಾಗಿ ಅಂತ ಹೇಳಿಸಿದ್ದಾರೆ. ಅಶೋಕ್ ಕುಮಾರ್ ಪತ್ನಿಯ ಮಾತು ನಂಬಿ ಮನೆಗೆ ಬಂದ ಪೂಜಾಳನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆ ವೇಳೆ ಪೂಜಾ ತನ್ನ ಮೂಲ ಹೆಸರು ಹೇಮಾ ಎಂದು ತಿಳಿಸಿದ್ದಾಳೆ. ಪೂಜಾ ಮತ್ತು ಅಶೋಕ್‍ಕುಮಾರ್ ಇಬ್ಬರ ಬಳಿ ತಲಾ 5 ಸಾವಿರ ರೂ.ಹಣ ದೊರೆಕಿದೆ. ಪ್ರಕರಣ ಸಂಬಂಧ ಪೊಲೀಸರು ಅಶೋಕ್ ಕುಮಾರ್ ಮತ್ತು ಪೂಜಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಮದುವೆ ವೇಳೆ ಪೂಜಾಳ ಅಣ್ಣ ಅಂತಾ ಹೇಳಿಕೊಂಡಿದ್ದ ಜಿತೇಂದ್ರ ನಾಪತ್ತೆಯಾಗಿದ್ದು, ಆತನ ಬಲೆಗಾಗಿ ಪೊಲೀಸರು ವಿಶೇಷ ಜಾಲ ಬೀಸಿದ್ದಾರೆ.