ಕಲಬುರಗಿ: ಎಂಆರ್‌ಎಂಸಿ ಮೆಡಿಕಲ್ ಕಾಲೇಜಿನ ಶಿಷ್ಯವೇತನ (Scholarship) ಹಗರಣದ ಸಂಬಂಧ ಕಾಂಗ್ರೆಸ್ (Congress) ಮುಖಂಡ ಹೆಚ್‍ಕೆಇ ಸೊಸೈಟಿ ಮಾಜಿ ಅಧ್ಯಕ್ಷನ ಮನೆ ಮೇಲೆ ಇಡಿ ದಾಳಿ (ED Raids) ನಡೆಸಿದೆ.
ಕಲಬುರಗಿಯ (Kalaburagi) ರಿಂಗ್ ರಸ್ತೆಯಲ್ಲಿರುವ ಭೀಮಾಶಂಕರ್ ಬಿಲಗುಂದಿಯವರ ಮನೆ ಮೇಲೆ ನಾಲ್ವರು ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯವೇತನ ಹಗರಣ ವಿಚಾರವಾಗಿ ಈ ದಾಳಿ ನಡೆದಿದೆ.
2018 ರಿಂದ 2024ರ ವರೆಗೆ ಎರಡು ಅವಧಿಗೆ ಭೀಮಾಶಂಕರ್ ಅಧ್ಯಕ್ಷರಾಗಿದ್ದರು. 700 ಜನ ಎಂಬಿಬಿಎಸ್ (MBBS) ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಣ ಕೊಡದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 80 ಕೋಟಿ ರೂ.ಗೂ ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣ ದಾಖಲಾಗಿದ್ದು ಯಾವಾಗ.?
ಎಂಆರ್‌ಎಂಸಿಯ 282ಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 81.21 ಕೋಟಿ ರೂ. ಸ್ಟೈಫಂಡ್ ಹಣವನ್ನು ಭೀಮಾಶಂಕರ ಸೇರಿದಂತೆ ನಾಲ್ವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ 2023ರ ಮಾರ್ಚ್ 31ರಂದು ನಗರದಲ್ಲಿರುವ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿದ್ಯಾರ್ಥಿಗಳ ಖಾತೆಗೆ ಸ್ಟೈಫಂಡ್ ಹಣ ಜಮೆ ಮಾಡಿಸಿ, ಬಳಿಕ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಅಕ್ರಮವಾಗಿ ಸಹಿ ಪಡೆದುಕೊಂಡಿದ್ದರು. ನಂತರ ಅಕ್ರಮವಾಗಿ ಸ್ಟೈಫಂಡ್ ಹಣವನ್ನು ವಿತ್‌ಡ್ರಾ ಮಾಡಿಕೊಂಡ ಈ ನಾಲ್ವರು, ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಈ ಪ್ರಕರಣ ಕುರಿತಾಗಿ ಸಮರ್ಪಕ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.