ರಾಯಪುರ: ಛತ್ತೀಸ್‌ಗಢನ (Chattisgarh) ಅಬುಜ್ಮಾರ್‌ನಲ್ಲಿ (Abujhmarh) ಅ.3ರಂದು ನಡೆದ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳು ಹತರಾಗಿದ್ದು, ಬಸ್ತಾರ್‌ನಲ್ಲಿ ನಡೆದ ಅತೀ ದೊಡ್ಡ ಎನ್‌ಕೌಂಟರ್ ಇದಾಗಿದೆ.
ಶುಕ್ರವಾರ ದಂತೇವಾಡ ಪೊಲೀಸರು (Dantewada Police) 9 ಗಂಟೆಗಳ ಕಾಲ ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 38 ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ. ಒಟ್ಟು 2.6 ಕೋಟಿ ರೂ.ಗೂ ಅಧಿಕ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಎನ್‌ಕೌಂಟರ್ ನಡೆದ ಒಂದು ದಿನದ ಬಳಿಕ 13 ಮಹಿಳೆಯರು ಸೇರಿದಂತೆ 31 ಮಾವೋವಾದಿಗಳ ಶವವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅ.13 ರಂದು ಮಾವೋವಾದಿಗಳು ತಮ್ಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಹೇಳಿಕೆಯ ಪ್ರಕಾರ ಒಟ್ಟು 35 ಮಾವೋವಾದಿಗಳು ಸಾವನ್ನಪ್ಪಿದ್ದು, ಅವರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಬಳಿಕ ತಮ್ಮ ಬಳಿಯಿದ್ದ ಮಾವೋವಾದಿಗಳ ಪಟ್ಟಿಯನ್ನು ಹಾಗೂ ಬಿಡುಗಡೆಗೊಳಿಸಿದ ಪಟ್ಟಿಯನ್ನು ತಾಳೆ ಮಾಡಿದಾಗ 7 ಹೆಚ್ಚುವರಿ ಹೆಸರಿರುವುದು ಗಮನಕ್ಕೆ ಬಂದಿದೆ.
ದಂತೇವಾಡ ಎಸ್‌ಪಿ ಗೌರವ್ ರೈ ಮಾಹಿತಿ ಪ್ರಕಾರ, ಎನ್‌ಕೌಂಟರ್ ಸ್ಥಳದಿಂದ ಭದ್ರತಾ ಪಡೆಗಳು ಶವಗಳನ್ನು ಸಾಗಿಸದೇ ಇರುವ ಸಂದರ್ಭದಲ್ಲಿ ಕೆಲವು ನಕ್ಸಲರು ತಮ್ಮ ಕಾರ್ಯಕರ್ತರಿಂದ ಆ ಶವಗಳನ್ನು ಸಾಗಿಸುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಎನ್‌ಕೌಂಟರ್ ವೇಳೆ ಹಲವಾರು ನಕ್ಸಲರು (Naxals) ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಕೆಲವರು ಅಲ್ಲಿಂದ ತಪ್ಪಿಸಿಕೊಳ್ಳುವಾಗ ಕೆಲವರನ್ನು ಎಳೆದುಕೊಂಡು ಹೋಗಿರಬಹುದು. ಆದರೆ ಅವರಿಗೆ ವೈದ್ಯಕೀಯ ಆರೈಕೆಯಿಲ್ಲದೆ ಬದುಕುಳಿಯುವುದು ಕಷ್ಟ ಎಂದು ತಿಳಿಸಿದರು.
ಬಸ್ತಾರ್ ರೇಂಜ್ ಐಜಿ ಪಿ ಸುಂದರರಾಜ್ ಮಾತನಾಡಿ, ಹತ್ಯೆಯಾದವರಲ್ಲಿ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯ, ವಿಭಾಗೀಯ ಸಮಿತಿ ಸದಸ್ಯ, ಪಿಎಲ್‌ಜಿಎ ಕಂಪನಿಯ 18 ಜನ, ಡಿಕೆಎಸ್‌ಜೆಡ್‌ಸಿ 2 ಗಾರ್ಡ್‌ಗಳು, 9 ಜನ ಕಮಿಟಿ ಸದಸ್ಯರು ಹಾಗೂ ಪ್ರದೇಶ ಕಮಿಟಿ ಸದಸ್ಯರು ಇದ್ದರು ಎಂದು ತಿಳಿಸಿದರು.
ನಾರಾಯಣಪುರ ಮತ್ತು ದಾಂತೇವಾಡದಿಂದ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಯ ಸುಮಾರು 1,500 ಯೋಧರು 72 ಗಂಟೆಗಳ ಕಾಲ ಬೃಹತ್ ಕಾರ್ಯಾಚರಣೆಯನ್ನು ನಡೆಸಿದ್ದು, 303 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.