ಕನ್ನಡದ ಪ್ರೇಕ್ಷಕರ ಔದಾರ್ಯದಿಂದಲೇ ಕನ್ನಡ ಚಿತ್ರರಂಗವೀಗ ಹೊಸ ಅಲೆಯ ಚಿತ್ರಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೊಸಾ ತಂಡವೊಂದು ಯಾವುದೇ ಜಾನರ್‍ನ ಸಿನಿಮಾ ರೂಪಿಸಿದರೂ ಅದು ವಿಶೇಷವಾಗಿರುತ್ತದೆಂಬ ನಂಬಿಕೆಯೇ ಅಂತಾ ಸಿನಿಮಾಗಳನ್ನು ಪ್ರತೀ ಪ್ರೇಕ್ಷಕರೂ ಕಾದು ನೋಡುವಂಥಾ ವಾತಾವರಣ ಸೃಷ್ಟಿಸಿದೆ. ಆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ರೂಪುಗೊಂಡಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಪ್ರಾರಂಭದ ದಿನಗಳಿಂದಲೇ ಸುದ್ದಿ ಮಾಡುತ್ತಾ ಸಾಗಿ ಬಂದು ಇದೀಗ ಬಿಡುಗಡೆಯ ಹಂತದಲ್ಲಿದೆ. ಈ ಹೊತ್ತಿನಲ್ಲಿ ಮತ್ತಷ್ಟು ಕುತೂಹಲ ಮೂಡಿಸೋ ಸಲುವಾಗಿಯೇ ಒಂದು ಟೀಸರ್ ಲಾಂಚ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಲಾಂಛನದಲ್ಲಿ ನಿರ್ಮಾಣಗೊಂಡಿರೋ ಚೇಸ್ ಚಿತ್ರದ ಟೀಸರ್ ಇದೇ ತಿಂಗಳ ಹದಿನಾರನೇ ತಾರೀಕಿನಂದು ಬಿಡುಗಡೆಯಾಗಲಿದೆ. ಇದುವರೆಗೂ ತನ್ನ ವಿಭಿನ್ನವಾದ ಪೋಸ್ಟರ್‍ಗಳ ಮೂಲಕವೇ ಭಿನ್ನ ಕಥೆಯ ಛಾಯೆಯನ್ನು ಹೊಮ್ಮಿಸುತ್ತಾ ಪ್ರೇಕ್ಷಕ ವರ್ಗವನ್ನು ಸೆಳೆದುಕೊಂಡು ಬಂದಿರೋ ಚಿತ್ರ ಚೇಸ್. ಇದರಲ್ಲಿ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ ಒಂದು ಮುಖ್ಯವಾದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಶ್ವೇತಾ ಸಂಜೀವುಲು ಮುಂತಾದವರ ಅದ್ದೂರಿ ತಾರಾಗಣ ಈ ಚಿತ್ರದಲ್ಲಿದೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ನೊಂದಿಗೆ ಪ್ರೀತಿ ಪ್ರೇಮ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ಚಿತ್ರ. ಒಂದು ಸಿನಿಮಾ ಫಟಾಫಟ್ ಅಂತ ಸೃಷ್ಟಿಯಾಗಿ ಬಿಡಬಲ್ಲ ಪವಾಡವಲ್ಲ. ಅದು ಹಲವಾರು ವರ್ಷಗಳ ಧ್ಯಾನ, ತಪಸ್ಸಿನ ಫಲ. ಬಹುಶಃ ನಿರ್ದೇಶಕ ವಿಲೋಕ್ ಶೆಟ್ಟಿ ವರ್ಷಾಂತರಗಳ ಕಾಲ ಈ ಕಥೆಯನ್ನು, ದೃಷ್ಯಗಳನ್ನು ಧ್ಯಾನಿಸದೇ ಹೋಗಿದ್ದರೆ ಚೇಸ್ ಎಂಬ ದೃಷ್ಯ ಕಾವ್ಯವೊಂದು ಸಿದ್ಧಗೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಕೊಂಚ ಸುದೀರ್ಘಾವಧಿ ಅನ್ನಿಸಿದರೂ ಪ್ರತಿಯೊಂದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೇ ಈ ಸಿನಿಮಾವನ್ನು ಸಿದ್ಧಗೊಳಿಸಲಾಗಿದೆ. ಆದರೆ ಇದರ ಕಥೆಯ ಬಗ್ಗೆ ಯಾವ ವಿಚಾರವನ್ನೂ ಚಿತ್ರತಂಡ ಈವರೆಗೂ ಜಾಹೀರು ಮಾಡಿರಲಿಲ್ಲ. ಹದಿನಾರರಂದು ಬಿಡುಗಡೆಯಾಗಲಿರೋ ಟೀಸರ್‍ನಲ್ಲಿ ಕಥೆಯ ಹೊಳಹು ಕಾಣಬಹುದೆಂಬ ನಿರೀಕ್ಷೆಗಳಿವೆ.