ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆಯ (Rain) ಅಬ್ಬರ ಹೆಚ್ಚಾಗಿದ್ದು, ಭಾರೀ ಗಾಳಿ ಮಳೆಯಿಂದ ಚಾರ್ಮಾಡಿ ಘಾಟಿಯ (Sringeri) ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ.
ರಸ್ತೆ ಬಂದ್ ಆಗಿರುವ ಪರಿಣಾಮ ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಮರ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಮಹಲ್ಗೋಡು ಸೇತುವೆ ಜಲಾವೃತ
ಮಳೆಯ ಅಬ್ಬರದಿಂದ ಎನ್‌ಆರ್‌ಪುರ (NRPura) ತಾಲೂಕಿನ ಮಹಲ್ಗೋಡು ಸೇತುವೆ ಸಹ ಮುಳುಗಡೆಯಾಗಿದೆ. ಪರಿಣಾಮ ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಸೇತುವೆ ಜಾಲಾವೃತವಾಗಿದ್ದು ಜನ ಪರದಾಡುವಂತಾಗಿದೆ.
ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಬಂದ್
ಇನ್ನೂ ಶೃಂಗೇರಿಯ (Sringeri) ನೆಮ್ಮಾರು ಬಳಿ ಹೆದ್ದಾರಿ 169ರಲ್ಲಿ ತುಂಗಾ ನದಿ ಸೇತುವೆ ಮೇಲೆ ಹರಿಯುತ್ತಿದ್ದು, ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಇನ್ನೂ ನದಿಯ ಆರ್ಭಟ ಕಂಡು ವಾಹನ ಚಾಲಕರು ಭಯಗೊಂಡು ವಾಪಸ್ಸಾಗಿದ್ದಾರೆ.