– ಪತಿ ಹತ್ಯೆ ಬಳಿಕ ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದ ಸೋನಲ್
ಶಿಲ್ಲಾಂಗ್: ಹನಿಮೂನ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 790 ಪುಟಗಳ ಚಾರ್ಜ್‌ಶೀಟನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ ಬೆಚ್ಚಿಬೀಳಿಸುವಂತಹ ಹಲವಾರು ಅಂಶಗಳಿವೆ. ಹತ್ಯೆ ಆರೋಪಿ ಮಹಿಳೆ ಸೋನಮ್ ಎದುರಲ್ಲೇ ಆಕೆಯ ಗಂಡನ ಕೊಲೆ ನಡೆದಿದೆ ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಮಿ ರಾಜಾ ರಘುವಂಶಿ (29) ಹತ್ಯೆ ಹಿಂದಿನ ಪಿತೂರಿ ಹೇಗಿತ್ತು? ಕೊಲೆ ಹೇಗೆ ಮಾಡಲಾಯ್ತು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸೋನಮ್ ಮತ್ತು ರಾಜ್ ಸೇರಿದಂತೆ ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಜೂ.8 ಮತ್ತು 9 ರಂದು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.
ರಾಜಾ ರಘುವಂಶಿ ಜೊತೆ ಸೋನಮ್‌ಗೆ ವಿವಾಹವಾಗಿತ್ತು. ದಂಪತಿ ಹನಿಮೂನ್‌ಗೆ ತೆರಳಿದ್ದರು. ಆದರೆ, ಸೋನಮ್‌ಗೆ ರಾಜ್ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು. ಲವ್ವರ್ ಜೊತೆ ಸೇರಿಕೊಂಡು ಪತಿಯನ್ನು ಮುಗಿಸಲು ಸೋನಮ್ ಸಂಚು ರೂಪಿಸಿದ್ದಳು. ಕೊಲೆಗಾಗಿ ಲವ್ವರ್ ಜೊತೆ ಇನ್ನೂ ಮೂವರ ಸಹಾಯವನ್ನು ಪಡೆದಿದ್ದಳು. ಈಕೆಯ ಎದುರೇ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾನ್ ಮತ್ತು ಆನಂದ್ ಕುರ್ಮಿ ಆರೋಪಿಗಳು ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ್ದಾರೆಂಬುದು ತನಿಖೆಯಿಂದ ಗೊತ್ತಾಗಿದೆ.
ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಆರೋಪಿಗಳೂ ಅಂದರ್
ಸಾಕ್ಷ್ಯಗಳನ್ನು ನಾಶಪಡಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಮೂವರು ಆರೋಪಿಗಳಾದ ಲೋಕೇಂದ್ರ ತೋಮರ್, ಬಲ್ಲಾ ಅಹಿರ್ವರ್ ಮತ್ತು ಶಿಲೋಮ್ ಜೇಮ್ಸ್ ಅವರನ್ನು ಬಂಧಿಸಿದ್ದಾರೆ. ಹೆಚ್ಚುವರಿ ವಿಧಿವಿಜ್ಞಾನದ ವರದಿಗಳನ್ನು ಸ್ವೀಕರಿಸಿದ ನಂತರ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು.
ಬಂಧಿತ ಆರೋಪಿಗಳ ವಿರುದ್ಧ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಗಣನೀಯ ಪ್ರಮಾಣದ ವಸ್ತು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ.
ಕೊಲೆ ಹೇಗಾಯ್ತು?
ಹಂತಕರಲ್ಲಿ ಒಬ್ಬನಾದ ವಿಶಾಲ್ ಸಿಂಗ್ ಚೌಹಾಣ್ ಮಾರಕಾಸ್ತ್ರದಿಂದ ರಾಜಾ ಮೇಲೆ ಹಲ್ಲೆ ನಡೆಸುತ್ತಾನೆ. ಈ ವೇಳೆ ಸೋನಮ್ ಸ್ಥಳದಲ್ಲೇ ಇರುತ್ತಾಳೆ. ಪತಿ ರಕ್ತಸ್ರಾವದಿಂದ ಕಿರುಚಾಡಿದಾಗ ಸ್ಥಳದಿಂದ ಓಡಿ ಹೋಗುತ್ತಾಳೆ. ನಂತರ ತನ್ನ ಪತಿ ಸತ್ತಾಗಲೇ ಆಕೆ ವಾಪಸ್ ಬರುತ್ತಾಳೆ. ನಂತರ ಆತನ ಮೃತದೇಹವನ್ನು ಕಮರಿಗೆ ಬಿಸಾಡುತ್ತಾರೆ. ಕೊಲೆಗೆ ಬಳಸಿದ ಮಾರಕಾಸ್ತ್ರ, ರಕ್ತಸಿಕ್ತ ಬಟ್ಟೆ, ದಂಪತಿ ಸಿಸಿಟಿವಿ ತುಣುಕು ಮತ್ತು ಅನೇಕ ಜನರ ಸಾಕ್ಷ್ಯಗಳ ರೂಪದಲ್ಲಿ ಅವರಿಗೆ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ಲು!
ಪತಿ ಹತ್ಯೆ ಬಳಿಕ ಸೋನಮ್ ತನ್ನ ತಾಳಿ ಮತ್ತು ಕಾಲುಂಗುರವನ್ನು ಬ್ಯಾಗ್‌ವೊಂದರಲ್ಲಿಟ್ಟು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದಳು. ಪರಿಶೀಲನೆ ವೇಳೆ ಪೊಲೀಸರು ಬ್ಯಾಗ್ ಸಿಕ್ಕಿತ್ತು. ಇದು ಪೊಲೀಸರಲ್ಲಿ ಸಾಕಷ್ಟು ಅನುಮಾನ ಹುಟ್ಟಿಸಿತು.